ಅಂತರಗಂಗೆಯಲ್ಲಿ ನೀರಿಲ್ಲದೇ ಕೋತಿಗಳ ನರಳಾಟ – ಹಸಿವು ನೀಗಿಸಿಕೊಳ್ಳಲು ಪ್ರವಾಸಿಗರ ಮೇಲೆ ಅಟ್ಯಾಕ್!

2 Min Read

ಕೋಲಾರ: ಅಲ್ಲಿ ವರ್ಷದ 365 ದಿನವೂ ಗಂಗೆ ನಿರಂತರವಾಗಿ ಹರೀತಾಳೆ. ಅದಕ್ಕಾಗಿಯೇ ಈ ಜಾಗವನ್ನ ಅಂತರಗಂಗೆ (Antara Gange) ಅಂತ ಕರೀತಾರೆ. ಆದ್ರೂ ಅಲ್ಲಿರುವ ಸಾವಿರಾರು ಕೋತಿಗಳ (Monkey) ದಾಹ, ಹಸಿವು, ಮಾತ್ರ ನೀಗುತ್ತಿಲ್ಲ. ಹಸಿವು ನೀಗಿಸಿಕೊಳ್ಳಲು ಪ್ರವಾಸಿಗರ ಮೇಲೆರಗಿ ಕಚ್ಚಿ ಗಾಯಗೊಳಿಸುತ್ತಿವೆ, ಮನುಷ್ಯರೂಪದ ವಾನರ ಸೇನೆ ದಾಳಿ ಕುರಿತು ಒಂದು ವರದಿ ಇಲ್ಲಿದೆ.

ಹನಿ-ಹನಿ ನೀರು ಕುಡಿದು ದಣಿವಾರಿಸಿಕೊಳ್ಳಲು ಪರದಾಡುತ್ತಿರುವ ಸಾವಿರಾರು ಕೋತಿಗಳು. ಬಿಸಿಲಿಗೆ ಬಸವಳಿದು ನಿತ್ರಾಣ ಸ್ಥಿತಿಯಲ್ಲಿ ಮಲಗಿರುವ ಮತ್ತಷ್ಟು ಮಂಗಗಳು. ಬಂದ ಪ್ರವಾಸಿಗರ (Tourists) ಬಳಿ ಏನಾದ್ರು ಕೊಡಿ ಎಂದು ಅಂಗಲಾಚುತ್ತಿರುವ ವಾನರಸೇನೆ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕೋಲಾರದ ಅಂತರಗಂಗೆಯಲ್ಲಿ.

ಹೌದು. ಬರದ ನಾಡು ಕೋಲಾರಕ್ಕೆ ಈ ಬಾರಿ ಉತ್ತಮ ಮಳೆಯಾಗಿದ್ರು ಬಿರುಬಿಸಿಲು ನೆತ್ತಿ ಸುಡುತ್ತಿದೆ. ಪರಿಣಾಮ ಮಿತಿ ಮೀರಿದ ತಾಪಮಾನದಿಂದ ತತ್ತರಿಸಿ ಹೋಗಿರುವ ಜನರು ಹನಿ-ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮನುಷ್ಯರ ಸ್ಥಿತಿ ಹೀಗಿದ್ರೆ ಪ್ರಾಣಿಗಳ ಪರಿಸ್ಥಿತಿ ಊಹಿಸಿಕೊಳ್ಳೋದು ಕಷ್ಟ ಸಾಧ್ಯ. ಅದರಲ್ಲೂ ಕೋಲಾರದ ಪ್ರಸಿದ್ಧ ಯಾತ್ರಾ ಸ್ಥಳವಾದ ಅಂತರಗಂಗೆಯ ಬೆಟ್ಟದಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಸಾವಿರಾರು ಕೋತಿಗಳದ್ದೂ ಹೇಳತೀರದ ಪರಿಸ್ಥಿತಿ. ಬೇಸಿಗೆಯಲ್ಲಿ ಇಲ್ಲಿನ ಪ್ರಾಣಿಗಳಿಗೆ ಕುಡಿಯಲು ನೀರಿಲ್ಲದೆ, ತಿನ್ನಲು ಆಹಾರವಿಲ್ಲದೇ ಹಸಿವಿನಿಂದ ಸಾಯುವ ಸ್ಥಿತಿ ಬಂದಿದೆ. ಕೆಲವು ಮಂಗಗಳು ಅಸ್ವಸ್ಥಗೊಂಡರೆ, ಕೆಲ ಮಂಗಗಳು ಪ್ರವಾಸಿಗರ ಬ್ಯಾಗ್‌ಗಳನ್ನ ಕಸಿದು ಹಸಿದು ನೀಗಿಸಿಕೊಳ್ತಿವೆ. ಈಗಾಗಲೇ 15 ಕ್ಕೂ ಹೆಚ್ಚು ಜನರನ್ನ ತೀವ್ರವಾಗಿ ಕಚ್ಚಿ ಗಾಯಗೊಳಿಸಿರುವ ವಾನರ ಸೇನೆ ಕ್ರೂರಿಗಳಂತೆ ವರ್ತಿಸಲು ಆರಂಭಿಸಿವೆ.

ಇನ್ನೂ ಕೋಲಾರ ನಗರಕ್ಕೆ ಕೂಗಳತೆ ದೂರದಲ್ಲಿರುವ ಅಂತರಗಂಗೆಯಲ್ಲಿ ಸಾವಿರಾರು ಕೋತಿಗಳಿವೆ. ಪ್ರತಿ ವರ್ಷ ಬೇಸಿಗೆಯಲ್ಲೂ ಆಹಾರ ಸಮಸ್ಯೆ ಎದುರಾಗುತ್ತೆ. ವಾರದಲ್ಲಿ ಎರಡ್ಮೂರು ದಿನ ಮಾರುಕಟ್ಟೆಯಿಂದ ಕೆಲವು ದಾನಿಗಳು ಹಣ್ಣು ತರಕಾರಿಗಳನ್ನು ತಂದುಕೊಡುವುದು ವಾಡಿಕೆ. ಇನ್ನು ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಗಾಗಿ ಮಾಡಿದ ಕೋಟ್ಯಂತರ ರೂಪಾಯಿ ಯೋಜನೆಗಳು ಮಾತ್ರ ಕೇವಲ ಪುಸ್ತಕದಲ್ಲಷ್ಟೇ ದಾಖಲೆ. ಇಲ್ಲಿನ ಕೆಲವು ಪ್ರಾಣಿಪ್ರಿಯರು ಈ ಕೋತಿಗಳ ಪರಿಸ್ಥಿತಿಯನ್ನು ನೋಡಲಾಗದೆ ಆಗಾಗ ಮುದ್ದೆ, ತರಕಾರಿ, ಹಣ್ಣುಗಳನ್ನು ತಂದು ಹಾಕುತ್ತಾರೆ. ಅರಣ್ಯ ಇಲಾಖೆ ಬೆಟ್ಟದಲ್ಲಿ ಪ್ರಾಣಿ ಪಕ್ಷಿಗಳಿಗೆ ಹಣ್ಣು ಸಿಗುವ ಗಿಡಮರಗಳನ್ನ ಬೆಳೆಸಬೇಕು ಅನ್ನೋದು ಸ್ಥಳೀಯರ ಆಗ್ರಹ.

ಒಟ್ನಲ್ಲಿ ನೂರಾರು ದೇವಾಲಯಗಳನ್ನು ನಿರ್ಮಾಣ ಮಾಡಿ ಹನುಮಂತನಿಗೆ ಪೂಜೆ ಮಾಡುವ ನಮ್ಮ ಜನರು, ಹನುಮಂತನ ಪ್ರತಿರೂಪ ಎಂದು ಹೇಳಲಾಗುವ ಈ ಕೋತಿಗಳಿಗೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಇನ್ನಾದ್ರು ಪ್ರಾಣಿ ಪ್ರಿಯರು, ಜಿಲ್ಲಾಡಳಿತ ಈ ಕೋತಿಗಳ ಹಸಿವು ನೀಗಿಸುವಲ್ಲಿ ಕ್ರಮ ಕೈಗೊಳ್ಳಬೇಕಿದೆ.

Share This Article