ಬರದನಾಡು ರಾಯಚೂರಲ್ಲಿ ಕೈದಿಗಳಿಗೂ ತಟ್ಟಿದ ನೀರಿನ ಬಿಸಿ!

Public TV
1 Min Read

ರಾಯಚೂರು: ಬಿಸಿಲನಾಡು ಎಂದೇ ಖ್ಯಾತಿ ಪಡೆದಿದ್ದ ಜಿಲ್ಲೆಯು ಈಗ ಅಕ್ಷರಶಃ ಬರದನಾಡಾಗಿ ಮಾರ್ಪಟ್ಟಿದ್ದು, ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಗಳಿಗೆ ಸಹ ನೀರಿನ ಬಿಸಿ ಮುಟ್ಟಿದೆ.

ಹೌದು, ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ಜಿಲ್ಲೆಯಲ್ಲಿ ಹರಿದರೂ, ಜನರಿಗೆ ಕುಡಿಯಲು ಮಾತ್ರ ನೀರಿಲ್ಲ. ಜನ-ಜಾನುವಾರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಇದರ ಜೊತೆ ಜಿಲ್ಲೆಯಲ್ಲಿರುವ ಕಾರಾಗೃಹದ ಕೈದಿಗಳು ಸಹ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಟಿವಿ, ಚೆಸ್, ಕೇರಂ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಮಾಡಲಾಗಿದೆ. ಆದರೆ ಇಲ್ಲಿನ ಕೈದಿಗಳು ಹಾಗೂ ಸಿಬ್ಬಂದಿಗಳ ಕ್ವಾಟರ್ಸ್ ಗಳಿಗೆ ನಿತ್ಯ ನೀರು ಒದಗಿಸುವುದು ಜೈಲರ್‍ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಾರಾಗೃಹಕ್ಕೆ ಸುಮಾರು ವರ್ಷಗಳಿಂದ ನೀರುಣಿಸುತ್ತಿದ್ದ ಬೋರ್‍ವೆಲ್ ಇಂಗಿ ಹೋಗಿದ್ದು, ಹೊಸದಾಗಿ 300 ಅಡಿ ಕೊರೆದರೂ ನೀರು ಬೀಳುತ್ತಿಲ್ಲ.

ನಗರಸಭೆ ನಗರಕ್ಕೆ ಸರಿಯಾಗಿ ನೀರು ಕೊಡಲಾಗದೇ ಅಸಹಾಯಕ ಸ್ಥಿತಿಯಲ್ಲಿದೆ. ಹೀಗಾಗಿ ಒತ್ತಾಯ ಪೂರ್ವಕವಾಗಿ ನಗರಸಭೆಯಿಂದ ನಿತ್ಯ ಟ್ಯಾಂಕರ್ ಮೂಲಕ ಕಾರಾಗೃಹಕ್ಕೆ ನೀರಿನ ಸರಬರಾಜು ಮಾಡಲಾಗುತ್ತಿದೆ. 240 ಪುರುಷರು 20 ಮಹಿಳೆಯರನ್ನ ಬಂಧಿಸಿಡಬಹುದಾದ ಕಾರಾಗೃಹದಲ್ಲಿ ಸದ್ಯ 201 ಕೈದಿಗಳಿದ್ದಾರೆ. ಇದರಲ್ಲಿ 13 ಜನ ಮಹಿಳಾ ಕೈದಿಗಳಿದ್ದಾರೆ. ಜೈಲಿನಲ್ಲಿ ನೀರಿನ ಸಂಪ್ ಇದ್ದರೂ ಸರಿಯಾಗಿ ನೀರು ಬಾರದ ಕಾರಣ ನಿತ್ಯ-ಕರ್ಮಗಳು ಹಾಗೂ ಕುಡಿಯಲು ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ದಿನನಿತ್ಯ ಕಾರಾಗೃಹದ ಮುಂದೆ ನಗರಸಭೆ ವಾಟರ್ ಟ್ಯಾಂಕ್ ಯಾವಾಗಲೂ ನಿಂತಿರುತ್ತದೆ.

ಅರ್ಧ ಕಿ.ಮೀ ದೂರದಿಂದ ನಗರಸಭೆ ರೈಸಿಂಗ್ ಲೈನ್ ಸಂಪರ್ಕವನ್ನು ಪಡೆದಿದ್ದರೂ, ನಿತ್ಯ ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಾಗಿದೆ. ನಗರಕ್ಕೆ ನೀರು ಒದಗಿಸುತ್ತಿದ್ದ ರಾಂಪುರ ಕೆರೆ ಒಣಗಿರುವುದರಿಂದ ಸಂಪೂರ್ಣ ರಾಯಚೂರು ಜಿಲ್ಲೆ ಬಾಯಾರಿ ಕುಳಿತಿದೆ. ಕೈದಿಗಳು ಮಾತ್ರವಲ್ಲದೆ ಕಾರಾಗೃಹ ಸಿಬ್ಬಂದಿ ಸಹ ನೀರಿನ ಸಮಸ್ಯೆಯನ್ನ ಎದುರಿಸುತ್ತಿದ್ದು, ನಗರಸಭೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *