ಮೂರ್ನಾಲ್ಕು ವರ್ಷದಿಂದ ಬರಿದಾಗಿದ್ದ ಸಂಗಮನಾಥ ಹಳ್ಳ ಮಳೆಗೆ ಭರ್ತಿ- ದೇವಸ್ಥಾನ ಜಲಾವೃತ

Public TV
1 Min Read

ವಿಜಯಪುರ: ಮೂರ್ನಾಲ್ಕು ವರ್ಷದಿಂದ ನೀರಿಲ್ಲದೆ ಬರಿದಾಗಿದ್ದ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಸಂಗಮನಾಥ ಹಳ್ಳ  ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿದೆ.

ಮೂರ್ನಾಲ್ಕು ವರ್ಷದಿಂದ ಮಳೆ ಬಾರದ ಕಾರಣ ಹಳ್ಳದಲ್ಲಿ ನೀರು ಇರಲಿಲ್ಲ. ಆದರೆ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಳ್ಳ ಭರ್ತಿಯಾಗಿದೆ. ಜೊತೆಗೆ ಹಳ್ಳದ ಪಕ್ಕದಲ್ಲಿರುವ ಸಂಗಮನಾಥ ದೇವಸ್ಥಾನ ಜಲಾವೃತವಾಗಿದೆ. ದೇವಾಲಯದಲ್ಲಿ ಮೊಣಕಾಲಿನವರೆಗೆ ನೀರು ನಿಂತಿದ್ದರೂ ಸಹ ಸಂಗಮನಾಥನಿಗೆ ಪೂಜೆ ಸಲ್ಲಿಸಲಾಗುತ್ತಿದೆ.

ರಾತ್ರಿಯಿಡೀ ಸುರಿದ ಭಾರೀ ಮಳೆಗೆ ದೇವಸ್ಥಾನದ ಹೊರಗಡೆ ಇಟ್ಟಿದ್ದ ದೇವರ ಪಲ್ಲಕ್ಕಿ ಸಹ ಹಳ್ಳದಲ್ಲಿ ಹರಿದುಕೊಂಡು ಹೋಗಿದೆ ಎನ್ನಲಾಗಿದೆ. ಅಲ್ಲದೆ ದೇವಸ್ಥಾನದ ಗರ್ಭಗುಡಿಯಲ್ಲಿ ನೀರು ನುಗ್ಗಿದ ಹಿನ್ನೆಲೆ ಇಂದಿನ ಪೂಜಾ ಕಾರ್ಯಕ್ರಮವನ್ನು ದೇವಸ್ಥಾನದ ಹೊರಗಡೆಯೆ ನೆರವೇರಿಸಲಾಯಿತು.

ಮಳೆಯಿಲ್ಲದೆ ಕಂಗಾಲಾಗಿದ್ದ ರೈತರ ಮೊಗದಲ್ಲಿ ವರುಣನ ಆಗಮನ ಸಂತಸ ಮೂಡಿಸಿದ್ದು, ದ್ರಾಕ್ಷಿ ಬೆಳೆಗಾರರ ಪಾಲಿಗೆ ಮಳೆ ವರವಾಗಿದೆ. ಹೀಗಾಗಿ ಇಂದಿನಿಂದ ರೈತರು ದ್ರಾಕ್ಷಿ ಕಠಾವು ಮಾಡಲು ಪ್ರಾರಂಭಿಸಿದ್ದಾರೆ. ಕಳ್ಳಕವಟಗಿ, ಘೋಣಸಗಿ, ಬಾಬಾನಗರ, ತಿಕೋಟಾ, ಬಿಜ್ಜರಗಿ, ಹುಬನೂರ, ಟಕ್ಕಳಕಿ, ಸೋಮದೇವರಹಟ್ಟಿ ಎಲ್ಲ ಭಾಗಗಳಲ್ಲೂ ಮಳೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *