ಮೈಸೂರ: ರಾಜ್ಯದಲ್ಲಿ ಮುಂಗಾರು ಸಾಕಷ್ಟು ಪ್ರಮಾಣದಲ್ಲಿ ಸುರಿದಿದ್ದರಿಂದ ಜಿಲ್ಲೆಯ ಪ್ರತಿಷ್ಠಿತ ಕಬಿನಿ ಜಲಾಶಯ ಭರ್ತಿಯಾಗಿದೆ.
ರಾಜ್ಯದಲ್ಲೇ ಮೊದಲು ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಜಿಲ್ಲೆಯ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯ ಪ್ರತಿಬಾರಿಯೂ ಜುಲೈನಲ್ಲಿ ಭರ್ತಿಯಾಗುತ್ತದೆ. ಆದರೆ ಈ ಬಾರಿ ಕೇರಳದ ವೈನಾಡ್ ಪ್ರದೇಶದಲ್ಲಿ ಸಾಕಷ್ಟು ಮಳೆಯಾದ್ದರಿಂದ ಒಳ ಹರಿವು ಹೆಚ್ಚಿದ್ದು ಜೂನ್ ವೇಳೆಯಲ್ಲೇ ಭರ್ತಿಯಾಗಿದೆ.
ತಾರಕಾ ಜಲಾಶಯದಲ್ಲೂ 101 ಅಡಿ ನೀರಿದ್ದು, ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಸಧಿಕ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ 100 ರಿಂದ 150 ಅಡಿ ಹೆಚ್ಚಿನ ಒಳಹರಿವು ಬಂದು ಕಬಿನಿ ಜಲಾಶಯ ತುಂಬಿದೆ.
ರಾಜ್ಯದಲ್ಲಿ ಮಳೆ ಹೆಚ್ಚಾಗಿದ್ದರಿಂದ ಡ್ಯಾಮ್ ನ ಹೊರಹರಿವನ್ನು 35 ಸಾವಿರ ಕ್ಯೂಸೆಕ್ ಹೆಚ್ಚಿಸಲಾಗಿತ್ತು. ಈಗ ಮಳೆ ಕ್ಷೀಣಿಸಿದ ಕಾರಣ ಹೊರಹರಿವನ್ನು 500 ಕ್ಯೂಸೆಕ್‍ಗೆ ಇಳಿಸಲಾಗಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಾಗಿದ್ದು, ಈಗಾಗಲೇ 2282 ಅಡಿಗಳಷ್ಟು ನೀರನ್ನು ಸಂಗ್ರಹಿಸಲಾಗಿದೆ. ಡ್ಯಾಮ್ ನ ಸುರಕ್ಷತೆಯ ದೃಷ್ಟಿಯಿಂದ ಬಾಗಿನ ಅರ್ಪಿಸುವ ಮೊದಲೇ ನೀರನ್ನು ಹೊರಗೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲಾಶಯ ನಿರ್ಮಾಣವಾದಾಗಿನಿಂದ ಇದುವರೆಗೂ ಡ್ಯಾಮ್ ಜೂನ್ ಮೂರನವೇ ವಾರದ ಒಳಗಡೆ ತುಂಬಿರುವ ಉದಾಹರಣೆಯೇ ಇಲ್ಲ. ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಜೂನ್ ನಲ್ಲಿ ಭರ್ತಿಯಾಗಿದೆ. ಕಳೆದ ಬಾರಿ ಸೆಪ್ಟೆಂಬರ್ ನಲ್ಲಿ ಜಲಾಶಯ ಭರ್ತಿಯಾಗಿದ್ದು ಸಿದ್ದರಾಮಯ್ಯನವರು ಬಾಗಿನ ಅರ್ಪಿಸಿದ್ದರು.
ಕಬಿನಿ ತುಂಬಿದ ತಕ್ಷಣ ಅವಳಿಗೆ ಬಾಗಿನ ಅರ್ಪಿಸುವುದು ವಾಡಿಕೆ. ನೀರನ್ನು ಹೊರಗೆ ಬಿಡುವ ಮೊದಲೇ ಕಬಿನಿಗೆ ಬಾಗಿನ ಅರ್ಪಿಸಬೇಕು. ಆದರೆ ಜಲಾಶಯ ತುಂಬಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಬಾಗಿನ ಅರ್ಪಿಸಲು ವಿಳಂಬ ಮಾಡಿದ್ದಾರೆ. ಆದರೆ ಕಳೆದ ಬಾರಿ ಸಿದ್ದರಾಮಯ್ಯ ಮುಂಚಿತವಾಗಿಯೇ ಬಾಗಿನ ಅರ್ಪಿಸಿದ್ದರು.
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು ಕ್ಯೂಬಿಕ್ ಫೀಟ್ ಪರ್ ಸೆಕೆಂಡ್ ನ ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.