ಮಂಡ್ಯ: ಸತತವಾಗಿ ಸುರಿಯುತ್ತಿರುವ ಮಳೆಯಿಂದ ಎರಡು ವರ್ಷದ ನಂತರ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‍ಎಸ್ ಜಲಾಶಯದಲ್ಲಿ ನೀರಿನಮಟ್ಟ 113 ಅಡಿಗೆ ಏರಿಕೆಯಾಗಿದೆ.
124 ಅಡಿ ಗರಿಷ್ಟ ನೀರು ಸಂಗ್ರಹ ಸಾಮರ್ಥ್ಯ ಇರುವ ಡ್ಯಾಂನಲ್ಲಿ ಪ್ರಸ್ತುತ ಸೋಮವಾರ 113.32 ಅಡಿ ನೀರು ಸಂಗ್ರಹವಾಗಿದೆ. ಕೆಆರ್‍ಎಸ್ ಡ್ಯಾಂನ ಇಂದಿನ ಒಳಹರಿವಿನ ಪ್ರಮಾಣ 5183 ಕ್ಯೂಸೆಕ್ ಇದ್ದು, 574 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.
2013 ಮತ್ತು 2014ರ ಆಗಸ್ಟ್ ನಲ್ಲಿ ಡ್ಯಾಂನಲ್ಲಿ ಗರಿಷ್ಠ ಅಂದರೆ 124.80 ಅಡಿ ನೀರಿನ ಸಂಗ್ರಹವಾಗುವ ಮೂಲಕ ಡ್ಯಾಂ ಭರ್ತಿಯಾಗಿತ್ತು. 2015ರ ನವೆಂಬರ್ ನಲ್ಲಿ 110.87 ಅಡಿ ಸಂಗ್ರಹವಾಗಿದ್ದೇ ಗರಿಷ್ಠ ಪ್ರಮಾಣವಾಗಿತ್ತು. 2016ರ ಜುಲೈನಲ್ಲಿ 99.65 ಅಡಿ ನೀರಿನ ಸಂಗ್ರಹವೇ ಗರಿಷ್ಠ ಮಟ್ಟದಾಗಿತ್ತು.
ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.