ಮಂಡ್ಯ: ಕೆಲ ದಿನಗಳಿಂದ ಕಾವೇರಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆಆರ್‍ಎಸ್ ಡ್ಯಾಂನಲ್ಲಿ ನೀರಿನ ಸಂಗ್ರಹ ನೂರು ಅಡಿಯ ಗಡಿಯನ್ನು ತಲುಪಿದೆ.
2013 ಮತ್ತು 2014ರ ಆಗಸ್ಟ್‍ನಲ್ಲಿ ಡ್ಯಾಂನಲ್ಲಿ ಗರಿಷ್ಠ ಅಂದರೆ 124.80 ಅಡಿ ನೀರಿನ ಸಂಗ್ರಹವಾಗುವ ಮೂಲಕ ಡ್ಯಾಂ ಭರ್ತಿಯಾಗಿತ್ತು. 2015ರ ನವೆಂಬರ್‍ನಲ್ಲಿ 110.87 ಅಡಿ ಸಂಗ್ರಹವಾಗಿದ್ದೇ ಗರಿಷ್ಠ ಪ್ರಮಾಣವಾಗಿತ್ತು. 2016ರ ಜುಲೈನಲ್ಲಿ 99.65 ಅಡಿ ನೀರಿನ ಸಂಗ್ರಹವೇ ಗರಿಷ್ಠ ಮಟ್ಟದಾಗಿತ್ತು. ಈ ಬಾರಿ ನೂರು ಅಡಿ ನೀರಿನ ಸಂಗ್ರಹವಾಗಿದೆ.
124.80 ಅಡಿ ಗರಿಷ್ಠ ಪ್ರಮಾಣದ ಕೆಆರ್‍ಎಸ್ ಅಣೆಕಟ್ಟೆಯಲ್ಲಿ ಸದ್ಯ 100.10 ಅಡಿ ನೀರಿನ ಸಂಗ್ರಹವಿದೆ. ಇದರಲ್ಲಿ 12,231 ಕ್ಯೂಸೆಕ್ ಒಳಹರಿವು ಇದ್ದರೆ 8,029 ಕ್ಯೂಸೆಕ್ ಹೊರಹರಿವಿದೆ. ಮತ್ತೊಂದೆಡೆ ಡ್ಯಾಂಗೆ ನೀರು ಹರಿದು ಬರುತ್ತಿದ್ದರೂ ರೈತರಿಗೆ ಮಾತ್ರ ಖುಷಿಕೊಟ್ತಿಲ್ಲ.
ಕಳೆದ ಕೆಲ ದಿನಗಳಿಂದ ನಿರಂತರವಾಗಿ ಕೆಆರ್‍ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ರೈತರಿಗೆ ನೀರು ಕೊಡೋ ಮನಸ್ಸು ಮಾಡ್ತಿಲ್ಲ. ಇದು ಮಂಡ್ಯ ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಡ್ಯಾಂನಲ್ಲಿ ನೂರು ಅಡಿ ನೀರಿನ ಸಂಗ್ರಹವಾಗಿರೋದ್ರಿಂದ ನಾಲೆಗಳಿಗೆ ನೀರು ಬಿಟ್ಟರೆ ಒಂದಷ್ಟು ಬೆಳೆ ಬೆಳೆದುಕೊಳ್ತೀವಿ ಅಂತಾ ರೈತರು ಮನವಿ ಮಾಡಿಕೊಂಡಿದ್ದಾರೆ.
ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.