ಜಸ್ಟ್ 500 ರೂ. ನೀಡಿ 200 ಗ್ರಾಂ ಚಿನ್ನ ಕದಿಯೋ ಚಾಲಾಕಿ ಕಳ್ಳರ ವಿಡಿಯೋ ನೋಡಿ

Public TV
1 Min Read

ಯಾದಗಿರಿ: ಚಿನ್ನದ ಅಂಗಡಿಗೆ ಬಂದ ಕಳ್ಳರಿಬ್ಬರು ಸುಮಾರು 200 ಗ್ರಾಂ ಚಿನ್ನಾಭರಣ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೊಡಕಲ್ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳ್ಳರ ಈ ಕೃತ್ಯ ಎಲ್ಲ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಡಿಸೆಂಬರ್ 27, 2017ರಂದು ಕೊಡೆಕಲ್ ಗ್ರಾಮದ ಆನಂದ್ ಪತ್ತಾರ್ ಎಂಬವರ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಅಂಗಡಿಯಲ್ಲಿ ಗ್ರಾಹಕರು ಯಾರು ಇಲ್ಲದನ್ನೂ ಗಮನಿಸಿದ ಕಳ್ಳರು ಚಿನ್ನದ ಓಲೆ ಖರೀದಿಸುವ ನೆಪದಲ್ಲಿ ಬಂದಿದ್ದಾರೆ. ಕೆಲವು ಸಮಯದವರೆಗೆ ಬೇರೆ ಬೇರೆ ಚಿನ್ನಾಭರಣಗಳನ್ನು ನೋಡುವಂತೆ ನಟಿಸಿ, ಕೊನೆಗೆ ಸುಮಾರು 200 ಗ್ರಾಂ ಚಿನ್ನದ ಬಾಕ್ಸ್ ಜೇಬಿಗಿಳಿಸಿಕೊಳ್ಳಲು ಯತ್ನಿಸಿದ್ದಾರೆ. ಕಳ್ಳನ ಕೈಚಳಕ ಗಮನಿಸಿದ ವರ್ತಕ ಆನಂದ್ ಕೂಡಲೇ ಬಾಕ್ಸ್ ಕಸಿದುಕೊಂಡು ಅಂಗಡಿಯಿಂದ ಹೊರ ಅಟ್ಟಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಅಂಗಡಿಗೆ ಬಂದ ಕಳ್ಳ ಆರಂಭದಲ್ಲೇ 500 ರೂ. ನೀಡಿದ್ದಾನೆ. ನಂತರ ತನಗೆ ಚಿನ್ನದ ಓಲೆ ಬೇಕೆಂದು ಕೇಳಿದ್ದಾನೆ. ಗ್ರಾಹಕ ಎಂದು ತಿಳಿದ ವರ್ತಕ ತನ್ನಲ್ಲಿರುವ ಬೇರೆ ಬೇರೆ ಶೈಲಿಯ ಆಭರಣಗಳನ್ನು ತೋರಿಸಲು ಮುಂದಾಗಿದ್ದಾರೆ. ಕಳ್ಳ ನಯವಾದ ಮಾತುಗಳ ಮೂಲಕ ವರ್ತಕನನ್ನು ತನ್ನತ್ತ ಸೆಳೆಯುವ ವಿಫಲ ಯತ್ನ ಮಾಡಿದ್ದಾನೆ. ಸ್ವಲ್ಪ ಸಮಯದ ಬಳಿಕ ಕಳ್ಳನ ಸಹಚರ ಬಂದು ಆತನು ವ್ಯಾಪಾರಿಯ ಗಮನವನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದ್ದಾನೆ. ಕಳ್ಳ ಚಿನ್ನದ ಬಾಕ್ಸ್ ತನ್ನ ಜೇಬಿಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಆನಂದ್ ಅವರು ಕೂಡಲೇ ಆಭರಣ ಪಡೆದುಕೊಂಡು ಅಂಗಡಿಯಿಂದ ಹೊರ ಹೋಗುವಂತೆ ಗದರಿಸಿದ್ದಾರೆ.

ಜೋರು ಧ್ವನಿಯಲ್ಲಿ ಕಳ್ಳರೊಂದಿಗೆ ಮಾತನಾಡುತ್ತಿದ್ದಂತೆ ಸ್ಥಳೀಯರು ಅಂಗಡಿಯತ್ತ ಧಾವಿಸಿದ್ದಾರೆ. ಜನರನ್ನು ನೋಡಿದ ಕಳ್ಳರು ಬಂದ ದಾರಿಗೆ ಫಲವಿಲ್ಲ ಅಂತಾ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾರೆ. ಮೊದಲಿಗೆ ಬಂದ ಕಳ್ಳನ ಜೇಬಿನಲ್ಲಿ ಮಾರಾಕಸ್ತ್ರಗಳು ಇದ್ದಿರಬಹುದು ಎಂಬ ಶಂಕೆಯಿಂದ ಆತನನ್ನು ಹಿಡಿಯಲು ಮುಂದಾಗಲಿಲ್ಲ ಎಂದು ಚಿನ್ನದ ವರ್ತಕ ಆನಂದ್ ಪತ್ತಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

https://youtu.be/cGONtearJS4

Share This Article
Leave a Comment

Leave a Reply

Your email address will not be published. Required fields are marked *