ಕಲ್ಲಿನಿಂದ ಹೊಡೆದು ಕರಡಿಯನ್ನು ನದಿಗೆ ತಳ್ಳಿದ್ರು – ವಿಡಿಯೋ

Public TV
1 Min Read

ಶ್ರೀನಗರ: ಕಲ್ಲಿನಿಂದ ಹೊಡೆದು ಕಂದು ಬಣ್ಣದ ಕರಡಿಯನ್ನು ಕಡಿದಾದ ಪರ್ವತದಿಂದ ನದಿಗೆ ಬೀಳಿಸುತ್ತಿರುವ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಮ್ಮು-ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಕಾಡಿನಿಂದ ತಪ್ಪಿಸಿಕೊಂಡು ನಾಡಿನತ್ತ ಬಂದ ಕರಡಿಯನ್ನು ಜನರು ಕಲ್ಲಿನಿಂದ ಹೊಡೆದಿದ್ದಾರೆ. ಎತ್ತರದ ಶಿಖರದಿಂದ ಕೆಳಗೆ ಬೀಳುತ್ತಿರುವ ವಿಡಿಯೋ ಮಾಡಿ ಮಾನವೀಯತೆಯನ್ನು ಮರೆತಿದ್ದಾರೆ.

ದಾರಿ ತಪ್ಪಿ ನಾಡಿಗೆ ಬಂದ ಕರಡಿಯನ್ನು ಅಲ್ಲಿನ ಸ್ಥಳೀಯ ಜನರು ಓಡಾಡಿಸಿದ್ದಾರೆ. ಜನರ ಗಲಾಟೆಯಿಂದ ಭಯಗೊಂಡ ಕರಡಿ ಸಮೀಪದ ಎತ್ತರದ ಪ್ರದೇಶ(ಬೆಟ್ಟ)ವೇರಿದೆ. ಕಲ್ಲಿನಿಂದ ಹೊಡೆಯುತ್ತಾ ಜನರು ಕರಡಿಯನ್ನು ಬೆನ್ನತ್ತಿದ್ದಾರೆ. ಎತ್ತರ ಪ್ರದೇಶಕ್ಕೆ ತಲುಪಿದಂತೆ ಸಮತೋಲನ ಕಳೆದುಕೊಂಡು ಆಳವಾದ ಕಂದಕಕ್ಕೆ ಉರುಳಿದೆ. ಪ್ರಾಣ ಉಳಿಸಿಕೊಳ್ಳಲು ಕರಡಿ ಮತ್ತೆ ಮೇಲೆ ಬರಲು ಪ್ರಯತ್ನಿಸಿದೆ.

ಕರಡಿ ಪ್ರಾಣ ಉಳಿಸಿಕೊಳ್ಳಲು ಮೇಲೆ ಬರುತ್ತಿದ್ದನ್ನು ಕಂಡ ಜನರು ಮತ್ತೆ ಕಲ್ಲಿನ ದಾಳಿ ನಡೆಸಿದ್ದಾರೆ. ಕಲ್ಲಿನ ದಾಳಿಗೆ ಆಯತಪ್ಪಿದ ಕರಡಿ ಕಂದಕದಲ್ಲಿ ಹರಿಯುತ್ತಿರುವ ನದಿಯ ಪಾಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕರಡಿಯ ಸಾವಿಗೆ ಕಾರಣರಾದವರನ್ನು ಕಂಡು ಹಿಡಿದು ಶಿಕ್ಷೆ ನೀಡಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಕರಡಿಯ ಮೇಲೆ ಕಲ್ಲೆಸೆದವರನ್ನು ಪತ್ತೆ ಹಚ್ಚಿ ಅವರೆಲ್ಲ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ನದಿಯಲ್ಲಿ ಬಿದ್ದಿರುವ ಕರಡಿಯ ಪತ್ತೆಗಾಗಿ ವನ್ಯಜೀವಿ ಇಲಾಖೆಯಿಂದ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ಉಲ್-ಹಕ್ ಚೌಧರಿ ಸ್ಪಷ್ಟನೆ ನೀಡಿದ್ದಾರೆ.

ಈ ವಿಡಿಯೋ ರೀಟ್ವೀಟ್ ಮಾಡಿಕೊಂಡಿರುವ ಮಾಜಿ ಸಿಎಂ ಮೆಹಬೂಬ ಮುಫ್ತಿ, ಇದೊಂದು ಹೃದಯ ವಿದ್ರಾವಕ ಘಟನೆಯಾಗಿದ್ದು, ಅಮಾನವೀಯತೆಯ ಸಾಕ್ಷಿಯಾಗಿದೆ. ಪ್ರಾಣಿಗಳ ವಾಸಸ್ಥಳವನ್ನು ಅತಿಕ್ರಮಣ ಮಾಡಿಕೊಂಡಿದ್ದು ನಮ್ಮ ತಪ್ಪು ಎಂದು ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *