ರನೌಟ್ ಮಾಡಿದ ಜಡೇಜಾ ಸ್ಟೈಲ್ ನೋಡಿ ಅಶ್ವಿನ್‍ಗೆ ಆತಂಕ, ಕೊಹ್ಲಿಗೆ ಮುನಿಸು – ವಿಡಿಯೋ ನೋಡಿ

Public TV
2 Min Read

ರಾಜ್ ಕೋಟ್: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಎದುರಾಳಿ ತಂಡದ ಆಟಗಾರನನ್ನು ರನೌಟ್ ಮಾಡಿದ ಶೈಲಿಯನ್ನು ಕಂಡ ನಾಯಕ ಕೊಹ್ಲಿ, ಅಶ್ವಿನ್ ಆತಂಕಗೊಂಡು ಮುನಿಸು ತೋರಿಸಿ ಆಮೇಲೆ ನಗೆ ಬೀರಿದ ಘಟನೆಗೆ ರಾಜ್‍ಕೋಟ್ ಮೈದಾನ ಇಂದು ಸಾಕ್ಷಿಯಾಯಿತು.

ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ನ 12ನೇ ಓವರ್ ವೇಳೆ ಘಟನೆ ನಡೆದಿದ್ದು, ಈ ಸಮಯದಲ್ಲಿ ಸ್ಟ್ರೈಕ್ ನಲ್ಲಿದ್ದ ಶಿವೊನ್ ಹೇಟ್ಮೆಯರ್, ಅಶ್ವಿನ್ ಬೌಲಿಂಗ್‍ನಲ್ಲಿ ರನ್ ಕದಿಯಲು ಯತ್ನಿಸಿದರು. ಮತ್ತೊಂದು ಬದಿಯಲ್ಲಿದ್ದ ಸುನಿಲ್ ಅಂಬ್ರಿಸ್ ರನ್ ಗಾಗಿ ವೇಗವಾಗಿ ಓಡಿ ಕ್ರೀಸ್ ಮುಟ್ಟಿದ್ದರು. ಆದರೆ ಆ ವೇಳೆಗೆ ಬಾಲ್ ಜಡೇಜಾ ಕೈ ಸೇರಿದ್ದನ್ನು ಕಂಡ ಹೇಟ್ಮೆಯರ್ ಮತ್ತೆ ಹಿಂದಕ್ಕೆ ಓಡಿ ಟೀಂ ಇಂಡಿಯಾಗೆ ರನೌಟ್ ವಿಕೆಟ್ ಪಡೆಯುವ ಅವಕಾಶ ನೀಡಿದ್ದರು.

ಈ ಹಂತದಲ್ಲಿ ಚಮಕ್ ಮಾಡಲು ಮುಂದಾದ ಜಡೇಜಾ ಚೆಂಡನ್ನು ಬೌಲರ್ ಕೈಗೆ ಎಸೆಯದೇ ತಾವೇ ಓಡಿ ಬರಲು ಮುಂದಾದರು. ಇದನ್ನು ಗಮನಿಸಿದ ಹೇಟ್ಮೆಯರ್ ಓಡಿ ಮತ್ತೆ ಕ್ರೀಸ್ ತಲುಪಬೇಕೆನ್ನುವ ವೇಳೆಗೆ ಜಡೇಜಾ ರನೌಟ್ ಮಾಡಿದರು. ಇದನ್ನು ಗಮನಿಸುತ್ತಿದ್ದ ಕೊಹ್ಲಿ ಹಾಗೂ ಅಶ್ವಿನ್ ಒಂದು ಕ್ಷಣ ಆತಂಕಗೊಂಡು ಹುಬ್ಬೇರಿಸಿದ ದೃಶ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಮೊದಲ ಶತಕವನ್ನ ಅಮ್ಮನಿಗೆ ಅರ್ಪಿಸಿದ ಜಡೇಜಾ: ಇದಕ್ಕೂ ಮುನ್ನ ಮೊದಲ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದ್ದ ಜಡೇಜಾ ತಮ್ಮ ಮೊದಲ ಶತಕವನ್ನು ಅಮ್ಮನಿಗೆ ಅರ್ಪಿಸಿದ್ದಾರೆ. 2ನೇ ದಿನದಾಟದ ಅಂತ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಡೇಜಾ, ನಾನು ಭಾರತದ ಪರ ಆಡಬೇಕು ಎಂದು ಅಮ್ಮ ಕನಸು ಕಂಡಿದ್ದರು. ಅವರಿಗೆ ನಾನು ಯಾವುದೇ ಬಹುಮಾನ ಕೊಡಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ನನ್ನ ಪ್ರದರ್ಶನವನ್ನು ನೋಡಲು ಅಮ್ಮ ಇಲ್ಲ. ಅದ್ದರಿಂದ ನನ್ನ ಈ ವಿಶೇಷ ದಿನವನ್ನು ಅವರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಉಳಿದಂತೆ 2ನೇ ದಿನದಾಟದಲ್ಲಿ ಭಾರತದ 649 ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿರುವ ವೆಸ್ಟ್‍ಇಂಡೀಸ್ ತಂಡ 2ನೇ ದಿನದಾಟದ ಅಂತ್ಯಕ್ಕೆ 29 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 94 ರನ್ ಗಳಿಸಿದೆ. ವೆಸ್ಟ್ ಇಂಡೀಸ್ ಸದ್ಯ 555 ರನ್‍ಗಳ ಬೃಹತ್ ಹಿನ್ನಡೆಯಲ್ಲಿದ್ದು, ಫಾಲೋ ಆನ್ ಭೀತಿ ಎದುರಿಸುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *