ಟ್ರಂಪ್‌ ಉಚ್ಚಾಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಮಸ್ಕ್‌ ಕಂಪನಿಗಳಿಗೆ ಶಾಕ್‌!

Public TV
2 Min Read

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸ್ನೇಹಿತ ಎಲೋನ್‌ ಮಸ್ಕ್‌ (Elon Musk) ಅವರ ಜಗಳ ಮತ್ತಷ್ಟು ಹೆಚ್ಚಾಗಿದೆ. ಬೀದಿ ಜಗಳ ಹೆಚ್ಚಾಗುತ್ತಿದ್ದಂತೆ ಟೆಸ್ಲಾ (Tesla) ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿದೆ.

ಮಸ್ಕ್‌ ಅವರು ಟ್ರಂಪ್‌ (Donald Trump) ಅವರನ್ನು ಉಚ್ಚಾಟಿಸಿ ಉಪಾಧ್ಯಕ್ಷ ಜೆಡಿ ವಾನ್ಸ್‌ (JD Vance) ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಹೇಳಿದ ಬೆನ್ನಲ್ಲೇ ಟ್ರಂಪ್‌ ಮಸ್ಕ್‌ ಕಂಪನಿ ಜೊತೆ ಮಾಡಿಕೊಂಡಿದ್ದ ಸರ್ಕಾರಿ ಒಪ್ಪಂದಗಳನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ಹೊರ ಬಂದ ಬೆನ್ನಲ್ಲೇ ಟ್ರಂಪ್‌ ವಿರುದ್ಧ ಮಸ್ಕ್‌ ಕೆಂಡಾಮಂಡಲ

ಮಸ್ಕ್‌ ಅವರು ಟ್ರಂಪ್ ಅವರ ತೆರಿಗೆ ಕಡಿತ ಮತ್ತು ಖರ್ಚಿಗೆ ಸಂಬಂಧಿಸಿದ ಮಸೂದೆಯನ್ನು ಖಂಡಿಸಿ ಎಕ್ಸ್‌ನಲ್ಲಿ ನಿರಂತರ ಪೋಸ್ಟ್‌ ಮಾಡುತ್ತಿದ್ದರು. ಈ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದ ಟ್ರಂಪ್‌ ಈಗ ಮೊದಲ ಬಾರಿಗೆ ಪ್ರತಿಕ್ರಿಯಿಸಿ ಹಳಸಿದ ಸಂಬಂಧಕ್ಕೆ ವಿಷಾದ ವ್ಯಕ್ತಪಡಿದ್ದಾರೆ.

ಈಗ ಟ್ರಂಪ್‌ ಅವರು ಮಸ್ಕ್ ಅವರ ಇಂಟರ್ನೆಟ್ ಕಂಪನಿ ಸ್ಟಾರ್‌ಲಿಂಕ್ ಮತ್ತು ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್‌ನ ಆದಾಯಕ್ಕೆ ಕೊಕ್ಕೆ ಹಾಕುವುದಾಗಿ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ನಮ್ಮ ಬಜೆಟ್‌ನಲ್ಲಿ ಹಣವನ್ನು ಉಳಿಸಲು ಸುಲಭವಾದ ಮಾರ್ಗವೆಂದರೆ ಮಸ್ಕ್‌ ಜೊತೆ ಮಾಡಿಕೊಂಡಿದ್ದ ಸರ್ಕಾರಿ ಸಬ್ಸಿಡಿಗಳು ಮತ್ತು ಒಪ್ಪಂದಗಳನ್ನು ರದ್ದುಗೊಳಿಸುತ್ತೇನೆ. ಹಿಂದಿನ ಅಧ್ಯಕ್ಷ ಜೋ ಬೈಡನ್‌ ಈ ನಿರ್ಧಾರ ಕೈಗೊಳ್ಳದೇ ಇರುವುದು ನನಗೆ ಆಶ್ಚರ್ಯವ ಉಂಟು ಮಾಡಿದೆ ಎಂದಿದ್ದಾರೆ.

ಈ ಮಸೂದೆಯ ಬಗ್ಗೆ ಬಹುತೇಕ ಎಲ್ಲರಿಗೆ ಚೆನ್ನಾಗಿ ತಿಳಿದಿದೆ. ಈ ಮಸೂದೆ ಆರಂಭದಲ್ಲಿ ಅವರಿಗೆ ಯಾವುದೇ ಕಾಣಲಿಲ್ಲ. ಆದರೆ ಈಗ ಅವರಿಗೆ ಇದ್ದಕ್ಕಿದ್ದಂತೆ ಸಮಸ್ಯೆ ಕಾಣಿಸಿದೆ ಎಂದು ಟ್ರಂಪ್‌ ಟೀಕಿಸಿದರು.

ಇಬ್ಬರ ಬೀದಿ ಜಗಳ ಹೆಚ್ಚಾಗುತ್ತಿದ್ದಂತೆ ಟೆಸ್ಲಾ ಷೇರು ಮೌಲ್ಯ ದಾಖಲೆಯ 14%ರಷ್ಟು ಕುಸಿತವಾಗಿದೆ. ಗುರುವಾರ ಒಂದೇ ದಿನ ಒಂದು ಷೇರಿನ ಮೌಲ್ಯ 47 ಡಾಲರ್‌ ಇಳಿದಿದೆ. ಕಳೆದ 5 ದಿನಗಳಲ್ಲಿ 70 ಡಾಲರ್‌ ಇಳಿಕೆಯಾಗಿದೆ.

Share This Article