ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ – ಹಿಂದೂಗಳ ಮನೆಗೆ ಬೆಂಕಿ, ಯವತಿಯರಿಗೆ ಲೈಂಗಿಕ ಕಿರುಕುಳ

Public TV
3 Min Read

– ನದಿ ದಾಟಿ ಶಾಲೆ, ಬಂಧುಗಳ ಮನೆಯಲ್ಲಿ ಆಶ್ರಯ
– ಮನೆಗೆ ಬಾಂಬ್‌ ಎಸೆದು ಗಂಡಸರ ಮೇಲೆ ಹಲ್ಲೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ವಕ್ಫ್ ಕಾಯ್ದೆ (Waqf Act) ವಿರೋಧಿ ಹೋರಾಟಗಳು ಮತ್ತಷ್ಟು ಹಿಂಸಾರೂಪ ಪಡೆದಿದ್ದು ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.

ಮುರ್ಷಿದಾಬಾದ್‌ನಲ್ಲಿ ಮುಸ್ಲಿಮ್ (Muslims) ಪ್ರಾಬಲ್ಯದ ಪ್ರದೇಶಗಳಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು ಲೂಟಿಗಳು ಕೂಡ ಶುರುವಾಗಿವೆ. ಇದು ಭಾರೀ ಆತಂಕಕ್ಕೆ ಕಾರಣವಾಗಿದೆ.

 

ಮುಸ್ಲಿಮರು ದಾಳಿ ನಡೆಸಬಹುದು ಎಂಬ ಭೀತಿಯಲ್ಲಿ ಅನೇಕ ಹಿಂದೂ ಕುಟುಂಬಗಳು ಗುಳೆ ಹೊರಟಿವೆ. ಸುತಿ, ಧುಲಿಯಾನ್, ಜಂಗೀಪುರ, ಶಂಶೇರ್‌ಗಂಜ್ ಪ್ರದೇಶಗಳಿಂದ ಹಿಂದೂಗಳು ವಲಸೆ ಹೋಗ್ತಿದ್ದಾರೆ. ಹಿಂದೂಗಳು ಭಾಗೀರಥಿ ನದಿ ದಾಟಿ ಪ್ರಾಣ ಉಳಿಸಿಕೊಂಡಿದ್ದಾರೆ. ಮಾಲ್ಡಾ ಸೇರಿ ವಿವಿಧೆಡೆ ಬಂಧುಗಳ ಮನೆ, ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ. ದೋಣಿಗಳಲ್ಲಿ ಬರುವವರಿಗೆ ಸಹಾಯ ಮಾಡಲು ನದಿ ದಂಡೆಯಲ್ಲಿ ಸ್ವಯಂಸೇವಕರನ್ನು ನಿಯೋಜಿಸಿದೆ.

 

 

ನಮ್ಮ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳೀಯರು ಮಹಿಳೆಯರು ಮತ್ತು ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಕುಟುಂಬದಿಂದ ಇತರ ನಾಲ್ವರು ಸದಸ್ಯರೊಂದಿಗೆ ಧುಲಿಯನ್‌ನ ಮಂದಿರಪಾರ ಪ್ರದೇಶದಿಂದ ಓಡಿ ಪಾರಾಗಿ ಬಂದಿದ್ದೇವೆ ಎಂದು ಯುವತಿಯೊಬ್ಬಳು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾಳೆ.

ನಮ್ಮ ಮನೆಗಳ ಮೇಲೆ ಬಾಂಬ್‌ (Bomb) ಎಸೆದು ಗಂಡು ಮಕ್ಕಳ ಮೇಲೆ ಹಲ್ಲೆ ನಡೆಸಿದರು. ಅಷ್ಟೇ ಅಲ್ಲದೇ ನಮ್ಮ ಮನೆಗಳನ್ನು ತೊರೆಯುವಂತೆ ಸೂಚಿಸಿದರು. ಕೇಂದ್ರ ಪಡೆಗಳ ಸಹಾಯದಿಂದ ನಾವು ಪಾರಾಗಿ ಬಂದಿದ್ದೇವೆ ಎಂದು ಯುವತಿ ಹೇಳಿದಳು.

 

ಹಿಂಸಾಚಾರದ ನಂತರ 400 ಜನರು ಧುಲಿಯನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಧಾರ್ಮಿಕವಾಗಿ ಪ್ರೇರಿತರಾದ ಮತಾಂಧರ ಭಯದಿಂದ ಮುರ್ಷಿದಾಬಾದ್‌ನ ಧುಲಿಯನ್‌ನಿಂದ 400 ಕ್ಕೂ ಹೆಚ್ಚು ಹಿಂದೂಗಳು ನದಿಯನ್ನು ದಾಟಿ ಪಾರ್ ಲಾಲ್‌ಪುರ್ ಹೈಸ್ಕೂಲ್, ದಿಯೋನಾಪುರ್-ಸೋವಾಪುರ್ ಜಿಪಿ, ಮಾಲ್ಡಾದ ಬೈಸ್ನಬ್‌ನಗರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಇದು ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದ್ದು ಟಿಎಂಸಿ ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಬಂಗಾಳದಲ್ಲಿ ನಡೆಯುತ್ತಿರುವ ಗಲಭೆಗಳು ಸರ್ಕಾರಿ ಪ್ರೇರಿತ ಎಂದು ಆಪಾದಿಸಿದೆ. ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಕೇಸರಿ ಪಡೆ ಒತ್ತಾಯಿಸಿದೆ.

ಟಿಎಂಸಿ ಸರ್ಕಾರ ಈ ಘಟನೆಗಳನ್ನು ನಾವು ಖಂಡಿಸುತ್ತೇವೆ. ಸದ್ಯಕ್ಕೆ ಯಾವುದೇ ಸಮಸ್ಯ ಇಲ್ಲ, ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ ಎಂದು ತಿರುಗೇಟು ನೀಡಿದೆ. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಗಲಭೆ-ಹತ್ಯೆ ಮಾಡುವುದು ತಪ್ಪು ಎಂದು ಕಾಂಗ್ರೆಸ್ ಹೇಳಿದೆ.

Share This Article