ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆಬಾಗುತ್ತೇನೆ: ಅರುಣ್‌ ಯೋಗಿರಾಜ್‌

Public TV
2 Min Read

ಅಯೋಧ್ಯೆ: ಬಾಲರಾಮನ ಹಣೆಯ ಮೇಲಿನ ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ನಾನು ತಲೆಬಾಗುತ್ತೇನೆ ಎಂದು ಶಿಲ್ಪಿ ಅರುಣ್‌ ಯೋಗಿರಾಜ್‌ ಹೇಳಿದ್ದಾರೆ.

ಅಯೋಧ್ಯೆಯಲ್ಲಿ (Ayodhya) ಇಂದು ರಾಮಲಲ್ಲಾನ ದರ್ಶನ ಪಡೆದ ಬಳಿಕ ಪ್ರತಿಕ್ರಿಯಿಸಿದ ಅವರು, ರಾಮನ ದರ್ಶನಕ್ಕೆ ಲಕ್ಷಾಂತರ ಜನರು ಬರುತ್ತಿದ್ದಾರೆ. ಶ್ರೀರಾಮನ ಆಶೀರ್ವಾದದಿಂದ ನಾನು ಕೂಡ ಇಂದು ನನ್ನ ಕುಟುಂಬದೊಂದಿಗೆ ರಾಮಲಲ್ಲಾನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

ಇದೇ ವೇಳೆ ಸೂರ್ಯ ತಿಲಕದ (Surya Tilak) ಬಗ್ಗೆ ಮಾತನಾಡಿ, ಇಂದಿನ ಸೂರ್ಯ ತಿಲಕವನ್ನು ನಾನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳ ಮುಂದೆ ನಾನು ತಲೆಬಾಗಲು ಬಯಸುತ್ತೇನೆ. ಈ ಕ್ಷಣವನ್ನು ವೀಕ್ಷಿಸಲು ಸಾಧ್ಯವಾಗಿದ್ದು ನನ್ನ ಅದೃಷ್ಟವೇ ಸರಿ ಎಂದು ಅರುಣ್‌ ಯೋಗಿರಾಜ್‌ ತಿಳಿಸಿದರು. ಇದನ್ನೂ ಓದಿ: 500 ವರ್ಷದ ಬಳಿಕ ರಾಮನವಮಿಯಂದು ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಅಭಿಷೇಕ, ಸೂರ್ಯ ತಿಲಕ!

ವಿಜ್ಞಾನಿಗಳು ನಾಲ್ಕು ವರ್ಷಗಳಿಂದ ಸೂರ್ಯ ತಿಲಕವನ್ನು ಸಾಧ್ಯವಾಗಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ವಿಜ್ಞಾನಿಗಳೊಂದಿಗೆ ಸಮಯ ಕಳೆಯಲು ಸಾಧ್ಯವಾಯಿತು. ನಾನು ಅತ್ಯಂತ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನಾವು ಇದನ್ನೆಲ್ಲಾ ಕಥೆಗಳಲ್ಲಿ ಮಾತ್ರ ಕೇಳಿದ್ದೇವೆ, ಆದರೆ ಇಂದು ನಮ್ಮ ವಿಜ್ಞಾನಿಗಳು ಇದನ್ನು ಸಾಧ್ಯವಾಗಿಸಿದ್ದಾರೆ ಎಂದು ಅರುಣ್‌ ಅವರು ವಿಜ್ಞಾನಿಗಳ ಕಾರ್ಯವನ್ನು ಶ್ಲಾಘಿಸಿದರು.

500 ವರ್ಷದ ಬಳಿಕ ಶ್ರೀರಾಮನ ಹುಟ್ಟಿದ ಸ್ಥಳ ಅಯೋಧ್ಯೆಯಲ್ಲಿ ರಾಮನವಮಿಯ (Rama Navami) ದಿನವಾದ ಇಂದು ಬಾಲರಾಮನಿಗೆ ಸೂರ್ಯ ಅಭಿಷೇಕ ನಡೆಯಿತು. ಭಗವಾನ್ ಶ್ರೀರಾಮನ ಜನ್ಮ ಮುಹೂರ್ತದ ವೇಳೆಯಲ್ಲೇ ಮಧ್ಯಾಹ್ನ 12 ಗಂಟೆಯ ನಂತರ ಸೂರ್ಯ ರಶ್ಮಿ ರಾಮ ಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸಿತು.

ರಾಮ ಮಂದಿರದಲ್ಲಿ (Ram Mandir) ಸೂಕ್ತ ಸ್ಥಳಗಳಲ್ಲಿ ಅಳವಡಿಸಿರುವ ಮಸೂರಗಳು ಸೂರ್ಯನ ಕಿರಣವನ್ನು ರಾಮಲಲ್ಲಾ ಮೂರ್ತಿಯ ಹಣೆಯನ್ನು ಸ್ಪರ್ಶಿಸಿತು. ಯಾವುದೇ ಬ್ಯಾಟರಿ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಕೆ ಮಾಡದೇ ಸೂರ್ಯನ ಕಿರಣಗಳು ನೇರವಾಗಿ ಬಾಲ ರಾಮನ ಹಣೆಯನ್ನು ಸ್ಪರ್ಶಿಸುವಂತೆ ಮಾಡಲು ಮಸೂರಗಳನ್ನು ಮಾತ್ರ ಬಳಕೆ ಮಾಡಲಾಗಿತ್ತು. ಈ ಕ್ಷಣಕ್ಕೆ ಸಾಕ್ಷಿಯಾಗಲು ಅರುಣ್‌ ಯೋಗಿರಾಜ್‌ ಅವರು ತಮ್ಮ ಕುಟುಂಬದೊಂದಿಗೆ ಮಂಗಳವಾರ ರಾತ್ರಿಯೇ ಅಯೋಧ್ಯೆಗೆ ಆಗಮಿಸಿದ್ದರು.

Share This Article