80 ಕಡೆ ದುರ್ಗಾಮೂರ್ತಿ ಪ್ರತಿಷ್ಠಾಪನೆಗೆ ಮನವಿ – ದಸರಾ ಮಾರ್ಗಸೂಚಿಗಾಗಿ ಎದುರುನೋಡ್ತಿರುವ ಬಿಬಿಎಂಪಿ

Public TV
1 Min Read

ಬೆಂಗಳೂರು: ದಸರಾ ಹಬ್ಬ ಸಮೀಪಿಸುತ್ತಿದೆ. ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದುರ್ಗಾದೇವಿಯ ಆರಾಧನೆಗೆ ಬಂಗಾಲಿ ಸಮಾಜದಿಂದ 80 ಕಡೆಗಳಲ್ಲಿ ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ. ಜೊತೆಗೆ 50-100 ಜನ ಭಾಗವಹಿಸಲು ಅನುಮತಿ ಕೇಳಿ ಬಿಬಿಎಂಪಿ ಕದ ತಟ್ಟಿದ್ದಾರೆ.

ಮನವಿಗಳು ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಸರ್ಕಾರದ ಮಾರ್ಗಸೂಚಿಗಾಗಿ ಎದುರುನೋಡುತ್ತಿದೆ. ಕೋವಿಡ್ ಹಿನ್ನೆಲೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ. ಇದನ್ನೂ ಓದಿ:  ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ – ಜಾಮೀನು ಅರ್ಜಿ ಸಲ್ಲಿಸಿದ ಎರಡನೇ ಆರೋಪಿ ಅಂಬಿಕಾ

ನಗರದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ, ತ್ವರಿತವಾಗಿ ನೀರು ನಿಲ್ಲುವ ಜಾಗ, ಲಾರ್ವಾ ಸರ್ವೇ, ಸೊಳ್ಳೆ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಬಿಬಿಎಂಪಿ ಕಾರ್ಯಾಚರಣೆ ನಡೆಸುತ್ತಿದೆ. ಜನರು ಸೊಳ್ಳೆ ಹೆಚ್ಚಿರುವ ಸ್ಥಳಗಳ ಮಾಹಿತಿಯನ್ನು ಸಹಾಯ ಆ್ಯಪ್‍ನಲ್ಲಿ ತಿಳಿಸಬಹುದಾಗಿದೆ.

ವೈರಲ್ ಫಿವರ್ ನಿಂದ ಮಕ್ಕಳು ಆಸ್ಪತ್ರೆ ಕಡೆಗೆ ಚಿಕಿತ್ಸೆಗಾಗಿ ಬರುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, 100 ಹಾಸಿಗೆಗಳ ಸುಮಾರು 50ಕ್ಕೂ ಹೆಚ್ಚು ಆಸ್ಪತ್ರೆಗೆ ಪ್ರತಿನಿತ್ಯ 25 ರಿಂದ 30 ಮಕ್ಕಳು ಬರುತ್ತಿದ್ದಾರೆ. ಈ ಪೈಕಿ 5% ಜನ ದಾಖಲಾಗುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅಣ್ಣಾಥೆ ಚಿತ್ರತಂಡ ಎಸ್‍ಪಿಬಿ ಅಭಿಮಾನಿಗಳಿಗೆ ನೀಡಿತು ಸಿಹಿಸುದ್ದಿ

ಕಳೆದ 4 ತಿಂಗಳಲ್ಲಿ 33,483 ಜನರು ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ ಮಕ್ಕಳ ದಾಖಲಾತಿ ಶೇ.30 ರಷ್ಟಿದೆ. 0-12 ವರ್ಷದೊಳಗಿನವರು 4,052 ಮಕ್ಕಳು, 12-18 ವರ್ಷದೊಳಗಿನವರು 1,368 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದರು.

ಗಡುವು ವಿಸ್ತರಣೆ!
ನಗರದಲ್ಲಿ ಮಳೆಯಿಂದಾಗಿ ರಸ್ತೆಗುಂಡಿಗಳು ಹೆಚ್ಚಾಗಿದ್ದು, ಎಲ್ಲಾ ಮುಖ್ಯರಸ್ತೆ ಹಾಗೂ ವಾರ್ಡ್ ರಸ್ತೆಗಳನ್ನು ದುರಸ್ತಿಪಡಿಸಲು 25 ದಿನಗಳ ಕಾಲಮಿತಿ ನೀಡಲಾಗಿದೆ. ಹೊರವಲಯದಲ್ಲಿ ಜಲಮಂಡಳಿ ಕಾಮಗಾರಿಯಿಂದ ಹಾಳಾದ ರಸ್ತೆ ಸರಿಪಡಿಸಲು ಸರ್ಕಾರ ಅನುದಾನ ನೀಡಿದ್ದು, ಟೆಂಡರ್ ಕರೆಯಲು ಸಿದ್ಧತೆ ಮಾಡಲಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *