ಪಂತ್ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್

Public TV
2 Min Read

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿ.ವಿ.ಎಸ್.ಲಕ್ಷ್ಮಣ್ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ ಯಶಸ್ಸು ಸಾಧಿಸುವಲ್ಲಿ ರಿಷಭ್ ಪಂತ್ ವಿಫಲರಾಗುತ್ತಿದ್ದಾರೆ. ಹೀಗಾಗಿ ಅವರನ್ನು ಆ ಕ್ರಮಾಂಕದಿಂದ ಕೆಳಕ್ಕೆ ಕಳುಹಿಸಬೇಕು. ಸ್ವತಂತ್ರವಾಗಿ ಆಡಲು ಬಿಟ್ಟರೆ ಪಂತ್ ಮತ್ತೆ ಫಾರ್ಮ್ ಗೆ ಹಿಂತಿರುಗುತ್ತಾರೆ ಎಂದು ವಿ.ವಿ.ಎಸ್ ಲಕ್ಷ್ಮಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2019ರ ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಆಡಿದ್ದ 21 ವರ್ಷದ ರಿಷಭ್ ಪಂತ್, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 45ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಆದರೆ ದುರದೃಷ್ಟವಶಾತ್ ಪಂತ್ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಕ್ರಮಾಂಕದಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ರಿಷಭ್ ಪಂತ್ ಐದನೇ ಅಥವಾ ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು. ಅಲ್ಲಿ ಪಂತ್ ದೊಡ್ಡ ಹೊಡೆತಗಳನ್ನು ಆಡಲು ಸ್ವಾತಂತ್ರ್ಯ ಪಡೆಯಬಹುದು. ನಾಲ್ಕನೇ ಸ್ಥಾನದಲ್ಲಿ ಹೇಗೆ ರನ್ ಗಳಿಸಬೇಕು ಎಂಬುದು ಪಂತ್‍ಗೆ ತಿಳಿದಿಲ್ಲ. ಹಾಗಾಗಿ ಪಂತ್ ಮೇಲೆ ಹೆಚ್ಚು ಒತ್ತಡ ಹೇರುವ ಅಗತ್ಯವಿಲ್ಲ. ಎಲ್ಲಾ ಆಟಗಾರರು ತಮ್ಮ ವೃತ್ತಿಜೀವನದಲ್ಲಿ ಕೆಟ್ಟ ಗಳಿಗೆಯನ್ನು ಹೊಂದಿದ್ದಾರೆ. ಸ್ಟ್ರೈಕ್‍ಗಳನ್ನು ತಿರುಗಿಸುವ ಮೂಲಕ ಅವರು ತಮ್ಮ ಆಟವನ್ನು ವೈವಿಧ್ಯಗೊಳಿಸುತ್ತಿದ್ದಾರೆ. ಆದರೆ ದುರದೃಷ್ಟವಶಾತ್ ಪಂತ್ ಶಾಟ್ ಆಯ್ಕೆಯು ಇನ್ನಿಂಗ್ಸ್ ನ ಆರಂಭದಲ್ಲಿ ಸರಿಯಾಗಿ ಸಿಗುತ್ತಿಲ್ಲ ಎಂದು ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.

ಅಯ್ಯರ್, ಹಾರ್ದಿಕ್ ಸರಿಯಾದ ಆಯ್ಕೆ:
ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಶ್ರೇಯಸ್ ಅಯ್ಯರ್ ಮತ್ತು ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಸರಿಯಾದ ಆಯ್ಕೆ. ಇಬ್ಬರೂ ಅನುಭವಿ ಆಟಗಾರರು. ಪಂತ್ ಮಹೇಂದ್ರ ಸಿಂಗ್ ಧೋನಿ ಅವರ ಸ್ಥಾನವನ್ನು ತುಂಬಬೇಕಿದೆ. ಈಗ ಪಂತ್ ಮೇಲೆ ವಿಭಿನ್ನ ಒತ್ತಡವಿದೆ. ಹಾಗಾಗಿ ಐದನೇ ಮತ್ತು ಆರನೇ ಸ್ಥಾನದಲ್ಲಿ ಪಂತ್ ಅವರನ್ನು ಬ್ಯಾಟಿಂಗ್ ಮಾಡಲು ಕಳುಹಿಸಬೇಕು. ಇದರೊಂದಿಗೆ ಪಂತ್ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಅವಕಾಶ ಸಿಗುತ್ತದೆ ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಪಂತ್ 4 ರನ್ ಗಳಿಸಲು ಶಕ್ತವಾಗಿದರು. ಮೂರನೇ ಪಂದ್ಯದಲ್ಲಿಯೂ 19 ರನ್ ಗಳಿಸಿದ ಪಂತ್ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ಮರಳಿದರು. ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕೂಡ ಪಂತ್ ಶಾಟ್ ಆಯ್ಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *