ಕೇರಳದ ಮಾಜಿ ಸಿಎಂ, CPI(M) ನಾಯಕ ಅಚ್ಯುತಾನಂದನ್ ನಿಧನ

Public TV
2 Min Read

ತಿರುವನಂತಪುರಂ: ಕಳೆದ ಕೆಲ ವರ್ಷಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಎಂನ ಹಿರಿಯ ನಾಯಕ ವಿ.ಎಸ್‌ ಅಚ್ಯುತಾನಂದನ್ (101) ಇಂದು ಕೊನೆಯುಸಿರೆಳೆದಿದ್ದಾರೆ.

ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರನ್ನು ಜೂನ್ 23 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಿರುವನಂತಪುರದ ಎಸ್‌ಯುಟಿ ಆಸ್ಪತ್ರೆಯಲ್ಲಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಚ್ಯುತಾನಂದನ್‌ ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ; ಎಸ್‌ಐಟಿ ತನಿಖೆ ಕಾಲಮಿತಿಯಲ್ಲಿ ಕಾನೂನು ಬದ್ಧವಾಗಿ ನಡೆಯಲಿ: ಬೊಮ್ಮಾಯಿ

ಇಂದು ಬೆಳಗ್ಗೆ ಹಾಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದನ್ ಆಸ್ಪತ್ರೆಗೆ ಭೇಟಿ ನೀಡಿ, ಅಚ್ಯುತಾನಂದನ್‌ ಅವರ ಆರೋಗ್ಯ ಸ್ಥಿತಿ ವಿಚಾರಿಸಿದ್ದರು. ವೈದ್ಯಕೀಯ ಮಂಡಳಿಯೊಂದಿಗೂ ಚರ್ಚೆ ನಡೆಸಿದ್ದರು. ಆದ್ರೆ ಮಧ್ಯಾಹ್ನದ ಹೊತ್ತಿಗೆ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿತ್ತು. ರಕ್ತದೊತ್ತಡದಲ್ಲಿ ಬದಲಾವಣೆಯಾದ ಬಳಿಕ ಆರೋಗ್ಯ ಸ್ಥಿತಿ ಗಂಭೀರ ಹಂತಕ್ಕೆ ತಲುಪಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬುದಾಗಿ ವೈದ್ಯ ಮೂಲಗಳು ತಿಳಿಸಿವೆ. ವಿಷಯ ತಿಳಿಯುತ್ತಿದ್ದಂತೆ ಹಿರಿಯ ಸಿಪಿಎಂ ನಾಯಕರಾದ ಎಸ್. ರಾಮಚಂದ್ರನ್ ಪಿಳ್ಳೈ, ಎಂ.ವಿ. ಜಯರಾಜನ್, ವೀಣಾ ಜಾರ್ಜ್ ಮತ್ತು ವಿ.ಎಂ. ಸುಧೀರನ್ ಆಸ್ಪತ್ರೆಗೆ ತೆರಳಿದ್ದಾರೆ. ಇದನ್ನೂ ಓದಿ: ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

ಬುಧವಾರ ಅಂತ್ಯಕ್ರಿಯೆ
ವಿ.ಎಸ್ ಅವರ ಪಾರ್ಥಿವ ಶರೀರವನ್ನ ತಕ್ಷಣವೇ ಎ.ಕೆ.ಜಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕ್ಕೆ ಕೊಂಡೊಯ್ಯಲಾಗುವುದು. ಇಂದು ರಾತ್ರಿ ಅಲ್ಲಿ ಸಾರ್ವಜನಿಕ ದರ್ಶನ ಇಡಲಾಗುತ್ತದೆ. ನಾಳೆ (ಜು.22) ಬೆಳಗ್ಗೆ 9 ಗಂಟೆಗೆ ಸಾರ್ವಜನಿಕ ದರ್ಶನಕ್ಕಾಗಿ ದರ್ಬಾರ್ ಹಾಲ್‌ಗೆ ಪಾರ್ಥೀವ ಶರೀರವನ್ನ ಇರಿಸಲಾಗುತ್ತದೆ. ಮಧ್ಯಾಹ್ನ ವಿ.ಎಸ್ ಅವರ ಪಾರ್ಥಿವ ಶರೀರವನ್ನ ರಾಷ್ಟ್ರೀಯ ಹೆದ್ದಾರಿ ಮೂಲಕ ಆಲಪ್ಪುಳದಲ್ಲಿರುವ ಮನೆಗೆ ಕೊಂಡೊಯ್ಯಲಾಗುತ್ತದೆ. ಬುಧವಾರ ಬೆಳಗ್ಗೆ ಆಲಪ್ಪುಳ ಸಿಪಿಎಂ ಜಿಲ್ಲಾ ಸಮಿತಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಅಂದು ಮಧ್ಯಾಹ್ನದ ಹೊತ್ತಿಗೆ ಅಲಪ್ಪುಳದ ವಲಿಯ ಚುಡುಕಾಡು ಎಂಬಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದನ್ ಮಾಹಿತಿ ನೀಡಿದ್ದಾರೆ.

Share This Article