ಬೆಂಗಳೂರು: ಬಿಹಾರದಲ್ಲಿಯೂ (Bihar) ವೋಟ್ ಚೋರಿ (Vote Theft) ಆಗಿದೆ. ಆದರೆ ಜನರ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಬಿಹಾರ ಚುನಾವಣೆ (Bihar Election) ಫಲಿತಾಂಶಕ್ಕೆ ಪ್ರತಿಕ್ರಿಯಿಸಿದ ಅವರು, ಯಾಕೆ ಹಿನ್ನಡೆ ಆಗಿದೆ ಗೊತ್ತಿಲ್ಲ, ನಾನು ಇನ್ನೂ ನೋಡಿಲ್ಲ, ಸರಿಯಾಗಿ ಮಾಹಿತಿ ಪಡೆದು ಮತ್ತೆ ಮಾತಾಡ್ತೀನಿ. ಯಾಕೆ ಜನ ವೋಟ್ ಹಾಕಿಲ್ಲ, NDA ಯಾಕೆ ಇಷ್ಟು ದೊಡ್ಡ ಬಹುಮತದಲ್ಲಿದೆ ಎನ್ನೋದು ಗೊತ್ತಿಲ್ಲ. ಇಲ್ಲೂ ವೋಟ್ ಚೋರಿ ಆಗಿದೆ. ಆದರೆ ನಾವು ಜನರ ತೀರ್ಪು ಒಪ್ಪಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎನ್‌ಡಿಎ 190+ ಕ್ಷೇತ್ರಗಳಲ್ಲಿ ಮುನ್ನಡೆ, ಡಬಲ್ ಡಿಜಿಟ್ ದಾಟಲು ಪರದಾಡುತ್ತಿದೆ ಕಾಂಗ್ರೆಸ್
ಕಾಂಗ್ರೆಸ್ ಅಜೆಂಡಾ ಓಬಿಸಿ ಅವರೇ ಬಿಹಾರದಲ್ಲಿ ಕೈ ಹಿಡಿದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಿತೀಶ್ ಕುಮಾರ್ (Nitish Kumar) ಯಾರು? ಅವರು ಓಬಿಸಿ ಅಲ್ಲವಾ? ಸಿಡಿಮಿಡಿಗೊಂಡಿದ್ದಾರೆ.
ಇದೇ ವೇಳೆ ಮುಧೋಳದಲ್ಲಿ ಕಬ್ಬು ಗಲಾಟೆ ವಿಚಾರವಾಗಿ ಮಾತನಾಡಿ, ಬೇರೆ ಎಲ್ಲಾ ರೈತರು 3,300 ರೂ. ಕಬ್ಬು ರೇಟ್ ಪಡೆಯೋಕೆ ಒಪ್ಪಿಕೊಂಡಿದ್ದಾರೆ. ಆದರೆ ಮುಧೋಳ ರೈತರು ಮಾತ್ರ ಒಪ್ಪಿಕೊಂಡಿಲ್ಲ. ಅವರ ಜೊತೆಗೂ ಮಾತುಕತೆ ನಡೆಯುತ್ತಿದೆ. ಯಾರು ಕಬ್ಬು, ಟ್ರ‍್ಯಾಕ್ಟರ್, ಟ್ರಾಲಿಗಳನ್ನ ಸುಟ್ಟಿ ಹಾಕಿದ್ದಾರೆ ಅಂತ ವಿಚಾರಣೆ ಮಾಡಿಸೋಣ. ರೈತರು ನಾವು ಸುಟ್ಟಿಲ್ಲ ಅಂತ ಹೇಳ್ತಿದ್ದಾರೆ. ಅದಕ್ಕಾಗಿಯೇ ವಿಚಾರಣೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ತೀವಿ ಎಂದು ಹೇಳಿದ್ದಾರೆ.
ರೈತರ ಹೋರಾಟದ ಹಿಂದೆ ರಾಜಕೀಯ ಪ್ರಚೋದನೆ ಇದ್ದೇ ಇರುತ್ತದೆ. ಬಿಜೆಪಿ ಅವರಿಗೆ ಬೇರೆ ಏನು ಕೆಲಸ ಇಲ್ಲ. ಹೀಗಾಗಿ ಎಲ್ಲದಕ್ಕೂ ಪ್ರಚೋದನೆ ಮಾಡಿಸುತ್ತಾರೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಬಿಹಾರದಲ್ಲಾಯ್ತು, ಮುಂದೆ ಬಂಗಾಳದಲ್ಲಿ ಗೆಲ್ತೀವಿ – ಕೇಂದ್ರ ಸಚಿವ ಗಿರಿರಾಜ್ ಸಿಂಗ್
