ಬಿಜೆಪಿಗೆ ಮತ ಹಾಕಿ ಇಲ್ಲವೇ ಪರಿಣಾಮ ಎದುರಿಸಿ- ಮುಸ್ಲಿಮರಿಗೆ ಬಿಜೆಪಿ ಮುಖಂಡ ಎಚ್ಚರಿಕೆ

Public TV
2 Min Read

ಲಕ್ನೋ: ನಿಮ್ಮ ಮತವನ್ನು ಬಿಜೆಪಿ ಪಕ್ಷಕ್ಕೆ ನೀಡಿ. ಇಲ್ಲವೆಂದಲ್ಲಿ ಮುಂದೆ ಬರಲಿರುವ ಪರಿಣಾಮವನ್ನು ನೀವೇ ಎದುರಿಸಲಿದ್ದೀರಿ ಅಂತ ಉತ್ತರಪ್ರದೇಶದ ಬಿಜೆಪಿ ಮುಖಂಡ ರಂಜೀತ್ ಕುಮಾರ್ ಶ್ರೀವತ್ಸವ್ ಮುಸ್ಲಿಮರಿಗೆ ಎಚ್ಚರಿಕೆ ನೀಡಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ.

ರಂಜೀತ್ ಪತ್ನಿ ಬರಾಬಂಕಿ ಜಿಲ್ಲೆಯ ಕ್ಷೇತ್ರವೊಂದರಿಂದ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪತ್ನಿ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ರಂಜೀತ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಭಾಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿ ಬಿಜೆಪಿ ಕಾರ್ಪೋರೇಟರ್ ಗಳಿಗೆ ನೀವು ಮತ ಹಾಕಿದ್ದಲ್ಲಿ ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬಹುದು. ಇಲ್ಲವೆಂದಲ್ಲಿ ಅಭಿವೃದ್ಧಿ ಎಂಬ ಪದವನ್ನು ಮರೆತುಬಿಡಿ ಅಂತ ಹೇಳಿದ್ದಾರೆ.

ಇದು ಸಮಾಜವಾದಿ ಪಕ್ಷದ ಸರ್ಕಾರ ಅಲ್ಲ. ಇಲ್ಲಿ ಯಾವೊಬ್ಬ ಮುಖಂಡನು ನಿಮಗೆ ಸಹಾಯ ಮಾಡಲ್ಲ. ರಸ್ತೆ, ಚರಂಡಿ, ಫುಟ್ಪಾತ್ ಕೆಲಸಕ್ಕಾಗಿ ಮುನಿಸಿಪಲ್ ಬೋರ್ಡ್ ಅನ್ನೇ ಸಂಪರ್ಕಿಸಬೇಕು. ನೀವು ನಮ್ಮ ಕಾರ್ಪೋ ರೇಟರುಗಳನ್ನು ಚುನಾಯಿಸದೇ ಇದ್ದರೆ, ನೀವು ರಂಜೀತ್ ಸಾಹೇಬ್ ಅವರ ಪತ್ನಿಗೆ ಮತ ನೀಡಿ ಆಕೆಯನ್ನು ಆರಿಸದೇ ಇದ್ದರೆ ಆಗ ಸಮಾಜವಾದಿ ಪಕ್ಷ ನಿಮ್ಮ ರಕ್ಷಣೆಗೆ ಬರುವುದಿಲ್ಲ. ಇದು ಬಿಜೆಪಿಯ ಆಡಳಿತ. ನೀವು ಈ ಹಿಂದೆ ಅನುಭವಿಸದೇ ಇದ್ದ ಕಷ್ಟ ಅನುಭವಿಸಬೇಕಾಗಬಹುದು ಅಂತ ಹೇಳಿದ್ದಾರೆ.

ಮುಸ್ಲಿಮರಲ್ಲಿ ನಾನು ಕೇಳಿಕೊಳ್ಳುವುವು ಏನೆಂದರೆ ಬಿಜೆಪಿಗೆ ಮತ ಹಾಕಿ. ನಾನು ನಿಮ್ಮ ಜೊತೆ ಮತವನ್ನು ಭಿಕ್ಷೆ ತರ ಬೇಡುತ್ತಿಲ್ಲ. ಬಿಜೆಪಿಗೆ ನೀವು ಮತ ಹಾಕಿದ್ರೆ ಮಾತ್ರ ನೀವು ಶಾಂತಿಯುತ ಜೀವನ ನಡೆಸಬಹುದು. ಒಂದು ವೇಳೆ ನೀವು ಮತ ಹಾಕದೇ ಇದ್ದಲ್ಲಿ ಮುಂದೆ ಕಷ್ಟ ಅನುಭವಿಸಲಿದ್ದೀರಿ ಅಂತ ಹೇಳಿದ್ದಾರೆ.

ನಾನು ಬೆದರಿಕೆ ಹಾಕುತ್ತಿದ್ದೇನೆ ಅಂತ ತಿಳಿದುಕೊಳ್ಳಬೇಡಿ, ನಾನು ಮತ ಹಾಕಿ ಅಂತ ಮುಸ್ಲಿಮರಿಗೆ ಬೆದರಿಕೆ ಹಾಕುತ್ತಿಲ್ಲ. ಅವರ ಮತಗಳನ್ನು ಬಿಜೆಪಿಗೆ ನೀಡುವಂತೆ ಮನವೊಲಿಸುತ್ತಿದ್ದೇನೆ ಅಷ್ಟೇ. ಅಲ್ಲದೇ ಹಿಂದೂ ಹಾಗೂ ಮುಸ್ಲಿಮರಿಗಿರುವ ದೊಡ್ಡ ವ್ಯತ್ಯಾಸದ ಕುರಿತು ಅವರಿಗೆ ಅರ್ಥೈಸಲು ಪ್ರಯತ್ನಿಸಿದ್ದೇನೆ. ಹಿಂದೂ, ಮುಸ್ಲಿಮ್ ಎಂಬ ಬೇಧ-ಭಾವ ಇಲ್ಲಿಗೆ ಕೊನೆಯಾಗಬೇಕು ಎಂದು ಅವರು ಹೇಳಿದ್ದಾರೆ.

ನವಾಬಗಂಜ್ ನಗರಪಾಲಿಕೆಯ ನಿರ್ಗಮನ ಅಧ್ಯಕ್ಷರಾಗಿರುವ ಶ್ರೀವಾಸ್ತವ ಎಂಬ ಬಿಜೆಪಿ ಮುಖಂಡರ ಪತ್ನಿ ಶಶಿಗೆ ಶ್ರೀವಾತ್ಸವ್ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿದೆ. ಈ ಭಾಷಣ ನವೆಂಬರ್ 13ರಂದು ನಡೆದಿದ್ದು, ಈ ವೇಳೆ ಬಾರಾಬಂಕಿ ಉಸ್ತುವಾರಿ ಸಚಿವರೂ ಆಗಿರುವ ದಾರಾ ಸಿಂಗ್ ಚೌಹಾಣ್ ನಂತರ ಪ್ರತಿಕ್ರಿಯಿಸಿ ಇಂತಹ ಹೇಳಿಕೆಗಳಿಂದ ಪಕ್ಷದ ಸದಸ್ಯರು ದೂರವಿರಬೇಕೆಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *