ಪುಟಿನ್‌ಗೆ ಕ್ಯಾನ್ಸರ್‌ – ಯುದ್ಧದ ವೇಳೆ ಅಧಿಕಾರ ಹಸ್ತಾಂತರ ಸಾಧ್ಯತೆ!

Public TV
1 Min Read

ಮಾಸ್ಕೋ: ಉಕ್ರೇನ್‌ ಮೇಲೆ ಸತತ ಎರಡು ತಿಂಗಳಿಂದ ಯುದ್ಧ ನಡೆಸುತ್ತಿದ್ದರೂ, ದೇಶವನ್ನು ಹತೋಟಿಗೆ ತೆಗೆದುಕೊಳ್ಳುವಲ್ಲಿ ವಿಫಲವಾಗಿ ಕಂಗೆಟ್ಟಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪುಟಿನ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪುಟಿನ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು. ದೇಶದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೇವ್ ಅವರಿಗೆ ತಾತ್ಕಾಲಿಕವಾಗಿ ಅಧಿಕಾರ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಯುಎಸ್‌ನ ನ್ಯೂಯಾರ್ಕ್ ಪೋಸ್ಟ್‌ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಯಾರೂ ಗೆದ್ದಿಲ್ಲ: ಮೋದಿ

ಪುಟಿನ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೆಂದು ವೈದ್ಯರು ಹೇಳಿದ್ದಾರೆ ಎಂದು ವರದಿಯಾಗಿದೆ. ರಷ್ಯಾದ ಮಾಜಿ ವಿದೇಶಿ ಗುಪ್ತಚರ ಸೇವೆಯ ಲೆಫ್ಟಿನೆಂಟ್ ಜನರಲ್ ನಡೆಸುತ್ತಿದ್ದ ಟೆಲಿಗ್ರಾಮ್ ಚಾನೆಲ್ ಅನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ರಷ್ಯಾದ ಅಧ್ಯಕ್ಷರು ಕ್ಯಾನ್ಸರ್ ಮತ್ತು ಪಾರ್ಕಿನ್ಸನ್ ಸೇರಿದಂತೆ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂಬ ವದಂತಿಗಳಿವೆ. ನಿರೀಕ್ಷಿತ ಶಸ್ತ್ರಚಿಕಿತ್ಸೆ ಮತ್ತು ಚೇತರಿಕೆಯು ಪುಟಿನ್ ಅವರನ್ನು ಕೆಲ ಕಾಲ ಅಸಮರ್ಥಗೊಳಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ರಷ್ಯಾ ಮುತ್ತಿಗೆ – ಮರಿಯುಪೋಲ್‌ನಿಂದ ನೂರಾರು ಜನರ ಸ್ಥಳಾಂತರ

ಆದರೆ, ಈ ವರದಿಯನ್ನು ದೃಢೀಕರಿಸುವ ಯಾವುದನ್ನೂ ನಾವು ನೋಡಿಲ್ಲ ಎಂದು ಪೆಂಟಗನ್ ವಕ್ತಾರ ಜಾನ್ ಕಿರ್ಬಿ ಹೇಳಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಕೆಲವು ದಿನಗಳ ಹಿಂದೆ ಪುಟಿನ್, ನಿಕೊಲಾಯ್ ಪಟ್ರುಶೆವ್ ಅವರೊಂದಿಗೆ ಎರಡು ಗಂಟೆಗಳ ಕಾಲ ತುಂಬಾ ಆತ್ಮೀಯವಾದ ಸಂಭಾಷಣೆ ನಡೆಸಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿಯು ಟೆಲಿಗ್ರಾಮ್ ಪೋಸ್ಟ್ ಅನ್ನು ಉಲ್ಲೇಖಿಸಿ ಹೇಳಿದೆ. ಇದನ್ನೂ ಓದಿ: ರಷ್ಯಾ ಪಡೆ ನನ್ನನ್ನು ಸೆರೆ ಹಿಡಿಯಲು ಭಾರೀ ಹತ್ತಿರದಲ್ಲಿತ್ತು: ಝೆಲೆನ್ಸ್ಕಿ

Vladimir Putin

ಇತ್ತೀಚಿನ ದಿನಗಳಲ್ಲಿ ರಷ್ಯಾದ ಅಧ್ಯಕ್ಷರ ಆರೋಗ್ಯದ ಬಗ್ಗೆ ಅನೇಕ ಚರ್ಚೆಗಳಾಗುತ್ತಿವೆ. ವಿಶೇಷವಾಗಿ ಕಳೆದ ತಿಂಗಳು ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರೊಂದಿಗಿನ ಭೇಟಿಯ ಸಮಯದಲ್ಲಿ ಪುಟಿನ್, ಮೇಜನ್ನು ಗಟ್ಟಿಯಾಗಿ ಹಿಡಿದಿದ್ದರು ಎಂದು ಹೇಳಲಾಗಿತ್ತು. ಇಂತಹ ಹಲವು ಸನ್ನಿವೇಶಗಳ ಮೂಲಕ ಪುಟಿನ್‌ ಆರೋಗ್ಯದ ಬಗ್ಗೆ ನಾನಾ ಪ್ರಶ್ನೆಗಳು ಉದ್ಭವಿಸುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *