ಸಾಹಸ ಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಸಮಾಧಿ ರಾತ್ರೋ ರಾತ್ರಿ ನೆಲಸಮವಾಗಿದೆ. ಈ ವಿಚಾರ ಹಾಗೂ ಅಭಿಮಾನ್ ಸ್ಟುಡಿಯೋದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗಮನಕ್ಕೆ ತರಲು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್, ನಿರ್ಮಾಪಕ ಕೆ.ಮಂಜು, ಸಾಹಿತಿ ಹಾಗೂ ನಿರ್ದೇಶಕರಾದ ಡಾ.ವಿ.ನಾಗೇಂದ್ರ ಪ್ರಸಾದ್ ಇನ್ನಿತರ ವಿಷ್ಣುವರ್ಧನ್ ಅಭಿಮಾನಿಗಳು ಸಭೆ ನಡೆಸಿದರು. ಫಿಲ್ಮ್ ಚೇಂಬರ್‌ನ ಅಧ್ಯಕ್ಷರು ಹಾಗೂ ನಿರ್ಮಾಪಕ ಸಂಘದ ಅಧ್ಯಕ್ಷರ ಸಮಕ್ಷಮದಲ್ಲಿ ಸಭೆ ನಡೆಸಿ ತಮ್ಮ ಮನವಿಯನ್ನ ಸಲ್ಲಿಸಿದ್ದಾರೆ ವಿಷ್ಣುವರ್ಧನ್ ಅಭಿಮಾನಿಗಳು.
ವಿಷ್ಣುಸೇನಾ ಸಮಿತಿಯ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ‘ಘಟನೆ ನಡೆದು 2 ವಾರಗಳು ಕಳೆಯುತ್ತಿದೆ. ಈ ಬಗ್ಗೆ ಚಿತ್ರರಂಗ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಾಕೆ ಧ್ವನಿ ಎತ್ತುತ್ತಿಲ್ಲ. ಒಟ್ಟಾರೆ ಫಿಲ್ಮ್ ಚೇಂಬರ್‌ನ ನಿಲುವೇನು..? ನಿಮ್ಮ ಉದ್ದೇಶವೇನು..? ಡಾ.ವಿಷ್ಣುವರ್ಧನ್ ಅವರ ವಿಚಾರದಲ್ಲಿ ಯಾಕೆ ಈ ಧೋರಣೆ ಎಂದು ಪ್ರಶ್ನಿಸಿದರು. ಅಲ್ಲದೆ, ಇದಕ್ಕೆ ಪರಿಹಾರ ಸಿಗದೇ ಇದ್ದರೆ ಕಲಾವಿದರ ಮನೆ ಮುಂದೆ ಧರಣಿ ಕೂರುತ್ತೇವೆ’ ಎನ್ನುವ ಖಡಕ್ ಸಂದೇಶವನ್ನ ರವಾನೆ ಮಾಡಿದ್ದಾರೆ ವೀರಕಪುತ್ರ ಶ್ರೀನಿವಾಸ್. ಇದನ್ನೂ ಓದಿ: ಡಾ. ವಿಷ್ಣು ಅಭಿಮಾನ ಸ್ಮಾರಕ – ಪುತ್ಥಳಿ ನಿರ್ಮಾಣಕ್ಕೆ ಚಾಲನೆ
ವೀರಕಪುತ್ರ ಶ್ರೀನಿವಾಸ್ ಅವರ ಪ್ರಶ್ನೆಗೆ ಉತ್ತರಿಸಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ಎಂ.ನರಸಿಂಹಲು, ‘ಘಟನೆ ನಡೆದ ದಿನ ಅಭಿಮಾನ್ ಸ್ಟುಡಿಯೋ ಬಳಿ ನಾನು ಆಗಮಿಸಿದ್ದೆ, 2016 ರಿಂದಲೂ ವಿಷ್ಣುವರ್ಧನ್ ಕುಟುಂಬಸ್ಥರು ಬರೆದಿರುವ ದಾಖಲೆಗಳು ನಮ್ಮ ಬಳಿ ಇವೆ. ವಿಷ್ಣು ಸಮಾಧಿ ಮೊದಲು ಹೇಗಿತ್ತು..? ಈಗ ಹೇಗಾಗಿದೆ ಎನ್ನುವ ಬಗ್ಗೆ ಎಲ್ಲ ದಾಖಲೆಗಳಿವೆ ಎಂದಿದ್ದಾರೆ. ಈ ವಿಷಯವನ್ನ ಸರ್ಕಾರದ ಗಮನಕ್ಕೆ ತರಲು ಪ್ರಯತ್ನ ನಡೆಸಿದ್ದೇವೆ. ಆದರೆ, ಈಗ ಅಧಿವೇಶನ ನಡೆಯುತ್ತಿರುವ ಕಾರಣ ಸಿಎಂ ಸಿಗುತ್ತಿಲ್ಲ. ಶೀಘ್ರವೇ ಸರ್ಕಾರದ ಗಮನಕ್ಕೆ ತರುತ್ತೇವೆ’ ಎನ್ನುವ ಭರವಸೆಯನ್ನ ಕೊಟ್ಟಿದೆ ಫಿಲ್ಮ್ ಚೇಂಬರ್. ಅಲ್ಲದೇ 10 ಗುಂಟೆ ಜಾಗವನ್ನ ಅಭಿಮಾನಿಗಳಿಗೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ವಾಣಿಜ್ಯ ಮಂಡಳಿ ನಿಮ್ಮ ಜೊತೆ ಇರುತ್ತೆ ಎನ್ನುವ ಮಾತುಗಳನ್ನಾಡಿದ್ದಾರೆ.
ನಿರ್ಮಾಪಕ ಕೆ.ಮಂಜು ಮಾತನಾಡಿ, ‘ಸಮಾಧಿ ಧ್ವಂಸ ಮಾಡಿದ್ದು ಬೇಸರ ತಂದಿದೆ. ನಾವು ಕಾನೂನಿನ ಚೌಕಟ್ಟನ್ನ ಮೀರಬಾರದು. ಬಾಲಣ್ಣ ಪುತ್ರ ಗಣೇಶ್ ಅವರು ಡಿಸಿ ಮುಂದೆ 10 ಗುಂಟೆ ಜಾಗವನ್ನ ವಿಷ್ಣು ಸಮಾಧಿಗೆ ಕೊಡೋದಾಗಿ ಹಿಂದೆನೇ ಒಪ್ಪಿಕೊಂಡಿದ್ದಾರೆ. ಬಾಲಣ್ಣ ಅವರ ಮೊಮ್ಮಗ ಕಾರ್ತಿಕ್ ಅವರನ್ನ ಕರೆಸಿ ಮಾತ್ನಾಡಿದೆ. ಈ ರೀತಿ ಮಾಡಿದ್ದು ತಪ್ಪು ಎಂದು ಹೇಳಿದ್ದೇನೆ. ಅಭಿಮಾನಿಗಳು ಏನಾದ್ರೂ ತಪ್ಪು ಮಾಡಿದ್ರೆ ನಾನು ಅವರ ಪರವಾಗಿ ಕ್ಷಮೆ ಕೇಳ್ತಿದ್ದೆ ಎಂದು ಕಾರ್ತಿಕ್ ಮುಂದೆ ಹೇಳಿದ್ದೇನೆ. ಆ ಜಾಗಕ್ಕಾಗಿ ಹಣ ನೀಡಲು ಕೂಡಾ ನಾವು ಸಿದ್ಧರಿದ್ದೇವೆ ಎಂದು ಹೇಳಿದೆ ಆದ್ರೆ ಅವರು ಹಣದ ವಿಚಾರ ಬಂದರೆ ನಾನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ನಾವು ಕಾನೂನು ನಿಟ್ಟಿನಲ್ಲಿ ಹೋರಾಡೋಣ ಇಲ್ಲವೇ ಬಾಲಣ್ಣ ಕುಟುಂಬಸ್ಥರ ಮುಂದೆ ಮನವಿ ಮಾಡಿ ಆ 10 ಗುಂಟೆ ಜಾಗ ಬಿಟ್ಟುಕೊಡುವಂತೆ ಕೇಳಿಕೊಳ್ಳೋಣ’ ಎಂದು ನಿರ್ಮಾಪಕ ಕೆ.ಮಂಜು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ವಿಷ್ಣುವರ್ಧನ್ ಸ್ಮಾರಕ ನೆಲಸಮ: ವಿಜಯ್ ರಾಘವೇಂದ್ರ ಬೇಸರ
ಸರ್ಕಾರ ಪರ್ಯಾಯವಾಗಿ ಮೈಸೂರಿನಲ್ಲಿ ಜಾಗ ಕೊಟ್ಟಿದೆ. ಅಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ. ಆದರೆ, ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯಾದ ಜಾಗಕ್ಕೂ ಅಭಿಮಾನಿಗಳಿಗೂ ಭಾವನಾತ್ಮ ಬೆಸುಗೆ ಇದೆ. ಹೀಗಾಗಿ ಆ 10 ಗುಂಟೆ ಜಾಗವನ್ನ ಅಭಿಮಾನಿಗಳಿಗೆ ಕೊಡಿಸುವಲ್ಲಿ ಸರ್ಕಾರ, ಫಿಲ್ಮ್ ಚೇಂಬರ್ ಹಾಗೂ ಕನ್ನಡ ಚಿತ್ರರಂಗದ ಕಲಾವಿದರು ದೊಡ್ಡ ಮನಸ್ಸು ಮಾಡಬೇಕು ಎನ್ನುವುದು ಸಮಸ್ತ ಕುಲಕೋಟಿ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಕೂಗಾಗಿದೆ. ಮುಂದಿನ ದಿನಗಳಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸಮಾಧಿ ಮರು ನಿರ್ಮಾಣವಾಗುತ್ತಾ..? ಅಭಿಮಾನಿಗಳ ಕನಸು ನನಸಾಗುತ್ತಾ ಕಾದು ನೋಡಬೇಕು.