ವಿಷ್ಣು ಸಮಾಧಿ ಸ್ಥಳವನ್ನು ಕಲಾಗ್ರಾಮವನ್ನಾಗಿ ಮಾಡಿ – ಸಿಎಂಗೆ ಶೋಭಾ ಕರಂದ್ಲಾಜೆ ಪತ್ರ

Public TV
1 Min Read

ಬೆಂಗಳೂರು: ನಟ ವಿಷ್ಣುವರ್ಧನ್ (Vishnuvardhan) ಸ್ಮಾರಕ ನೆಲಸಮ ಮಾಡಿದ್ದನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಖಂಡಿಸಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಪತ್ರ ಬರೆದಿದ್ದು, ವಿಷ್ಣು ಸಮಾಧಿ ಸ್ಥಳವನ್ನ ಸ್ವಾಧೀನ ಪಡಿಸಿಕೊಂಡು ಕಲಾಗ್ರಾಮವಾಗಿ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿದ್ದಾರೆ.

ಪತ್ರದಲ್ಲಿ, ಕನ್ನಡ ಚಲನಚಿತ್ರ ರಂಗಕ್ಕೆ ಡಾ. ವಿಷ್ಣುವರ್ಧನ್ ಅವರ ಕೊಡುಗೆಯ ಬಗ್ಗೆ ಇಡೀ ಕರುನಾಡಿನ ಮನೆಮನಗಳೂ ಮಾತನಾಡುತ್ತವೆ. ಎಲ್ಲರ ಮನೆಮಾತಾದ ಅಂತಹ ಅದ್ಭುತ ನಟಶ್ರೇಷ್ಠರಿಗೆ ಸೂಕ್ತ ಗೌರವ ನೀಡಲಾಗದೆ, ಅವರ ಸಮಾಧಿ ಸ್ಥಳವನ್ನು ಉಳಿಸಿಕೊಳ್ಳಲಾಗದ ಸ್ಥಿತಿಗೆ ನಾವು ತಲುಪಿದ್ದೇವೆ ಎಂದು ಬೇಸರ ಹೊರಹಾಕಿದ್ದಾರೆ.

ಸಮಾಧಿ ಸ್ಥಳದ ಅಭಿಮಾನ್ ಸ್ಟುಡಿಯೋ ಭಾಗವನ್ನು ರಾತ್ರೋರಾತ್ರಿ ಕೆಡವಿ, ಅಸಂಖ್ಯಾತ ಅಭಿಮಾನಿಗಳಿಗೂ ಹಾಗೂ ಅವರ ಅಪೂರ್ವ ಸಾಧನೆಗಳಿಗೂ ಅನ್ಯಾಯ ಮಾಡಿರುವುದು ಅತ್ಯಂತ ನೋವುಂಟುಮಾಡಿದೆ. ಆ ನಿಟ್ಟಿನಲ್ಲಿ, ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದ ಭೂಮಿಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೂಡಲೇ ಜಾಗದ ಮಾಲೀಕರಿಂದ ಸ್ವಾಧೀನಪಡಿಸಿಕೊಳ್ಳಬೇಕು. ಅವರಿಗೂ ಸರ್ಕಾರಿ ನಿಯಮಾನುಸಾರ ಪರಿಹಾರ ನ್ಯಾಯಸಮ್ಮತ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರ ಸ್ಮಾರಕವನ್ನು ಕಾಪಾಡುವುದಲ್ಲದೇ, ಅದನ್ನು ರಾಷ್ಟ್ರಮಟ್ಟದ ಪ್ರವಾಸಿ ಕೇಂದ್ರವಾಗಿ, ಕಲೆ-ಸಂಸ್ಕೃತಿಯ ಪ್ರತೀಕವಾಗಿ ಕಲಾಗ್ರಾಮವಾಗಿ ಅಭಿವೃದ್ಧಿಪಡಿಸಬೇಕು. ಕನ್ನಡ ನಾಡಿನ ಕಲೆ, ಸಂಸ್ಕ್ರತಿಗಳ ಉಳಿವಿಗೆ ಕೊಡುಗೆ ನೀಡಿದ ಪ್ರತಿಯೊಬ್ಬ ಕಲಾವಿದನ ಘನತೆ-ಗೌರವ ಕಾಪಾಡುವುದು ಕನ್ನಡಿಗರ ಕರ್ತವ್ಯ. ಜನಪ್ರತಿನಿಧಿಯಾಗಿ ಸದಾ ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Share This Article