ಸಿಲಿಕಾನ್ ಸಿಟಿಯಲ್ಲಿ ಹಿಟ್ ಅಂಡ್ ರನ್ ಕೇಸ್ – ತಲೆ ಮರೆಸಿಕೊಂಡಿದ್ದ ವಿಷ್ಣು ಪೊಲೀಸರಿಗೆ ಶರಣಾಗತಿ

Public TV
2 Min Read

– 5 ದಿನಗಳ ಕಾಲ ವಶಕ್ಕೆ ಪಡೆಯೋ ಸಾಧ್ಯತೆ

ಬೆಂಗಳೂರು: ಮದ್ಯದ ಮತ್ತಲ್ಲಿ ಹಿಟ್ ಅಂಡ್ ರನ್ ಮಾಡಿದ್ದ ಉದ್ಯಮಿ ಆದಿಕೇಶವುಲು ಮೊಮ್ಮಗ ವಿಷ್ಣು ಪೊಲೀಸರಿಗೆ ಶರಣಾಗಿದ್ದಾನೆ. ಸಿಸಿಬಿ ಪೊಲೀಸರ ಮುಂದೆ ಶರಣಾಗಿರೋ ಆರೋಪಿಯನ್ನು ಇಂದು ಕೋರ್ಟ್ ಮುಂದೆ ಹಾಜರುಪಡಿಸಿ 5 ದಿನ ಪೊಲೀಸ್ ಕಸ್ಟಡಿ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

ಸೆಪ್ಟೆಂಬರ್ 28ರ ಬೆಳಗಿನ ಜಾವ ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್‍ನಲ್ಲಿ ಸಿಕ್ಕಸಿಕ್ಕವರಿಗೆಲ್ಲಾ ಐಷಾರಾಮಿ ಬೆಂಜ್ ಕಾರಿನಲ್ಲಿ ಗುದ್ದಿ ಎಸ್ಕೇಪ್ ಆಗಿದ್ದ ಉದ್ಯಮಿ ಆದಿಕೇಶವುಲು ಮೊಮ್ಮಮ ಗೀತಾವಿಷ್ಣು. ಆತನ ಕಾರಿನಲ್ಲಿ ಡ್ರಗ್ಸ್ ಹಾಗೂ ಕೊಕೇನ್ ಸಿಕ್ಕಿತ್ತು. ಅಲ್ಲದೇ ಆತನ ಜೊತೆ ಕೆಲ ನಟರೂ ಇದ್ದರು. ರೇವ್ ಪಾರ್ಟಿಗೆ ಹೋಗಬೇಕಾದ್ದರೆ ಆಕ್ಸಿಡೆಂಟ್ ಮಾಡಿದ್ದರು ಎಂದು ಹೇಳಲಾಗಿತ್ತು. ಇಡೀ ಸುದ್ದಿ ದೊಡ್ಡ ಸದ್ದು ಮಾಡುತ್ತಿದ್ದಂತೆ ಆ ರಾತ್ರಿಯೇ ವಿಷ್ಣು ಎಸ್ಕೇಪ್ ಆಗಿದ್ದ. ವಿಷ್ಣುಗಾಗಿ ಪೊಲೀಸರೆಲ್ಲಾ ಆತನ ತಂದೆ ಸಹಾಯದಿಂದ ಹುಡುಕಾಡದ ಜಾಗವೇ ಇರಲಿಲ್ಲ.

ನಿರೀಕ್ಷಣಾ ಜಾಮೀನು ಸಿಗದ ಭಯಕ್ಕೆ ಶರಣಾಗತಿ?: ಕಳೆದ ಐದು ದಿನಗಳಿಂದ ತಲೆಮರೆಸಿಕೊಂಡಿದ್ದ ವಿಷ್ಣು ಮಂಗಳವಾರ ಸಂಜೆ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಬಂದು ಶರಣಾಗಿದ್ದಾನೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತಾಡಿದ ತಂದೆ ಶ್ರೀವಾಸಮೂರ್ತಿ ನನ್ನ ಮಗ ತಪ್ಪು ಮಾಡಿಲ್ಲ. ಡ್ರಗ್ಸ್ ಸೇವಿಸೋ ಅಭ್ಯಾಸ ಇಲ್ಲ. ಯಾರೋ ಆತನ ಕಾರಿನಲ್ಲಿ ಡ್ರಗ್ಸ್ ಇಟ್ಟಿರಬಹುದು ಅಂತಾ ಹೇಳಿದ್ದಾರೆ.

ಪೊಲೀಸರಿಗೆ ಫೋನ್ ಮಾಡಿ ಕರೆಸಿಕೊಂಡನಾ?: ತಲೆ ಮರೆಸಿಕೊಂಡಿದ್ದ ವಿಷ್ಣು ಯಾರಿಗೂ ಗೊತ್ತಾಗಬಾರದು ಅಂತಾ ಕೂದಲು ಕತ್ತರಿಸಿ, ಮೀಸೆ ಬೋಳಿಸಿಕೊಂಡು ವೇಷ ಬದಲಿಸಿಕೊಂಡಿದ್ದ. ನಾನು ಮಡಿಕೇರಿಯ ರಾಣಿಪೇಟ್‍ನಲ್ಲಿದ್ದೀನಿ. ಬನ್ನಿ ಸಾರ್ ಸರೆಂಡರ್ ಆಗ್ತೀನಿ ಅಂತಾ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನ ಕರೆಸಿಕೊಂಡು ಶರಣಾಗಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಇಂದು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತೆ. ಆದರೆ ಇಂದು ವಕೀಲರು ಇಂದು ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ಮಾಡಲಿದ್ದಾರೆ. ಹೀಗಾಗಿ ವಿಷ್ಣು ಇಂದು ಪೊಲೀಸರ ವಶದಲ್ಲೇ ಇರಬೇಕಾಗುತ್ತೆ.

ಸತ್ಯ ಹೊರ ಬರುತ್ತಾ?: ವಿಷ್ಣು ಜೊತೆ ಯಾರೆಲ್ಲಾ ಇದ್ದರು? ನಟ-ನಟಿಯರು ಇದ್ದರ? ಅವರರೆಲ್ಲಾ ಕುಡಿದಿದ್ದರ? ಡ್ರಗ್ಸ್ ಸೇವನೆ ಮಾಡಿದ್ದರಾ? ರೇವ್ ಪಾರ್ಟಿಗೆ ಹೋಗುತ್ತಿದ್ದರಾ? ಇನ್ನೂ ಅನೇಕ ಪ್ರಶ್ನೆಗಳಿಗೆ ವಿಷ್ಣುವೇ ಉತ್ತರ ನೀಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *