ಕೊಹ್ಲಿ Vs ರೋಹಿತ್ ನಾಯಕತ್ವ ಫೈಟ್ – ಸಂಕಷ್ಟದಲ್ಲಿ ಟೀಂ ಇಂಡಿಯಾ

Public TV
2 Min Read

ಮುಂಬೈ: ಟೀಂ ಇಂಡಿಯಾದ ಏಕದಿನ ನಾಯಕತ್ವದಿಂದ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾರನ್ನು ನಾಯಕನನ್ನಾಗಿ ನೇಮಿಸಿದ ಬೆನ್ನಲ್ಲೇ ಕೊಹ್ಲಿ ಮುನಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಈ ಮೂಲಕ ತಂಡದ ಒಳಗೆ ಆಟಗಾರರ ನಡುವೆ ಬಿನ್ನಭಿಪ್ರಾಯ ಮೂಡಿರುವುದು ಸ್ಪಷ್ಟವಾಗಿದ್ದು ಇದರಿಂದ ಟೀಂ ಇಂಡಿಯಾದ ಪ್ರದರ್ಶನಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ ಎಂದು ವಿಶ್ಲೇಷಿಸಲಾಗುತ್ತದೆ.

ಗುಂಪು ಕ್ರೀಡೆಯಲ್ಲಿ ಎಲ್ಲರೂ ಒಂದಾಗಿ ಆಡಿದರೆ ಗೆಲುವು ಖಂಡಿತ ಹಾಗಾಗಿ ಪ್ರತಿಯೊಂದು ಗುಂಪು ಕ್ರೀಡೆಯಲ್ಲೂ ಆಟಗಾರ ಒಗ್ಗಟ್ಟಾಗಿರುವುದು ಕೂಡ ಮುಖ್ಯವಾಗಿದೆ. ಇದು ಕ್ರಿಕೆಟ್‍ಗೂ ಕೂಡ ಅನ್ವಯಿಸುತ್ತದೆ. ಪ್ರತಿಯೊಬ್ಬರು ಆಟಗಾರರು ತಂಡಕ್ಕಾಗಿ ಆಡಿದರೆ ಗೆಲುವು ಅವರದ್ದೇ ಆಗಿರುತ್ತದೆ. ಆದರೆ ಇದೀಗ ಟೀಂ ಇಂಡಿಯಾದ ಪರಿಸ್ಥಿತಿ ಮಾತ್ರ ಮನೆಯೊಂದು ಮೂರು ಬಾಗಿಲಿನಂತಾಗಿದೆ. ಸೀಮಿತ ಓವರ್‌ಗಳ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾರಿಗೆ ಬಿಸಿಸಿಐ ಪಟ್ಟ ಕಟ್ಟಿದೆ. ಇದು ಕೊಹ್ಲಿಗೆ ತುಂಬಾ ಬೇಸರ ತರಿಸಿದೆ. ನನಗೆ ಬಿಸಿಸಿಐ ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಮುಂಚಿತವಾಗಿ ತಿಳಿಸಿಲ್ಲ ಎಂದು ಕೊಹ್ಲಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹೇಳದೇ ಕೇಳದೇ ನಾಯಕ ಪಟ್ಟದಿಂದ ತೆಗೆದ್ರು – ಮೌನ ಮುರಿದ ಕೊಹ್ಲಿ

ಈ ನಡುವೆ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಕೇಳಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಗಾಯಳುವಾಗಿ ಟೆಸ್ಟ್ ಸರಣಿಯಿಂದ ಹೊರನಡೆದಿದ್ದಾರೆ. ಈ ಹಿಂದೆಯೇ ರೋಹಿತ್ ಮತ್ತು ಕೊಹ್ಲಿ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿಗಳು ಬಂದಿತ್ತು. ಆದರೆ ಇಬ್ಬರೂ ಆಟಗಾರರು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದ್ದರು. ಆದರೆ ಈಗ ನಡೆಯುತ್ತಿರುವ ಬೆಳವಣಿಗೆಗಳು ಭಿನ್ನಾಭಿಪ್ರಾಯ ಜಾಸ್ತಿಯಾಗಿದೆ ಎಂಬ ಮಾತಿಗೆ ಪುಷ್ಠಿ ನೀಡುವಂತಿದೆ. ಇದನ್ನೂ ಓದಿ: ನಾಯಕತ್ವ ಪಟ್ಟದಿಂದ ಇಳಿಸಿದ್ದಕ್ಕೆ ಸಿಟ್ಟು? – ಅಭ್ಯಾಸ ಶಿಬಿರಕ್ಕೆ ಕೊಹ್ಲಿ ಗೈರು

ಈ ಎಲ್ಲದರ ನಡುವೆ ಟೆಸ್ಟ್ ತಂಡದ ಉಪನಾಯಕರು ಆಗಿರುವ ರೋಹಿತ್ ಶರ್ಮಾ ಸರಣಿಯಿಂದ ಹೊರ ನಡೆಯುತ್ತಿದ್ದಂತೆ ಇತ್ತ ಉಪನಾಯಕನ ಪಟ್ಟ ಯಾರಿಗೆ ಕೊಡುವುದು ಎಂಬ ಬಗ್ಗೆ ಬಿಸಿಸಿಐಗೆ ಗೊಂದಲವಿದೆ. ಹಾಗಾಗಿ ಇದೀಗ ಈ ಇಬ್ಬರ ಆಟಗಾರರ ಸ್ವಪ್ರತಿಷ್ಠೆಯಿಂದಾಗಿ ವಿಶ್ವದ ಬಲಿಷ್ಠ ಕ್ರಿಕೆಟ್ ತಂಡವೆಂದು ಬೀಗುತಿದ್ದ ಭಾರತಕ್ಕೆ ಇರಿಸುಮುರಿಸು ಶುರುವಾಗಿದೆ. ಆಟಗಾರರ ಕಚ್ಚಾಟದಿಂದಾಗಿ ತಂಡದಲ್ಲಿ ಹುಮ್ಮಸ್ಸಿಲ್ಲ. ಹಾಗಾಗಿ ಈ ಬಗ್ಗೆ ಬಿಸಿಸಿಐ ಗಂಭೀರವಾಗಿ ಪರಿಗಣಿಸಿ ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತಾ ಎಂಬ ಪ್ರಶ್ನೆಗೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಉತ್ತರ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *