ವಿಕೆಟ್ ಕೀಪರ್ ಆಗಿ ಕೆ.ಎಲ್.ರಾಹುಲ್ ಮುಂದುವರಿಯುತ್ತಾರೆ: ಕೊಹ್ಲಿ

Public TV
1 Min Read

ಬೆಂಗಳೂರು: ಇದುವರೆಗೂ ಸಾಲು ಸಾಲು ಟೂರ್ನಿಗಳಲ್ಲಿ ಟೀಂ ಇಂಡಿಯಾ ಪರ ಅವಕಾಶ ಪಡೆದಿದ್ದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗಾಯದ ಸಮಸ್ಯೆಯಿಂದ ಆಸೀಸ್ ಟೂರ್ನಿಯಿಂದ ಹೊರ ನಡೆದಿದ್ದರು. ಈ ಹಿನ್ನೆಲೆಯಲ್ಲಿ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸಿದ ಕೆ.ಎಲ್.ರಾಹುಲ್ ಬ್ಯಾಟಿಂಗ್ ಮಾತ್ರವಲ್ಲದೇ ವಿಕೆಟ್ ಹಿಂದೆಯೂ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ಅವರನ್ನೇ ವಿಕೆಟ್ ಕೀಪರ್ ಆಗಿ ಮುಂದುವರಿಸುವುದಾಗಿ ನಾಯಕ ಕೊಹ್ಲಿ ತಿಳಿಸಿದ್ದಾರೆ.

ಮುಂದಿನ ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಟೂರ್ನಿಗೆ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಮುಂದುವರಿಯುತ್ತಾರೆ ಎಂದು ವಿರಾಟ್ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ರಿಷಬ್ ಪಂತ್ ಮತ್ತೆ ತಂಡದೊಂದಿಗೆ ಕೂಡಿಕೊಳ್ಳಲು ನಿರೀಕ್ಷೆ ಮಾಡಬೇಕಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ನ್ಯೂಜಿಲೆಂಡ್ ಪ್ರವಾಸದಲ್ಲಿ ರಾಹುಲ್‍ರನ್ನೇ ವಿಕೆಟ್ ಕೀಪರ್ ಆಗಿ ಮುಂದುವರಿಸುತ್ತೇನೆ. ಆಸೀಸ್ ಸರಣಿಯಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್ ಆರ್ಡರ್ ಬದಲಾಗುತ್ತಿದ್ದರೂ ಉತ್ತಮವಾಗಿ ರನ್ ಗಳಿಸಿದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಾಮರ್ಥವಾಗಿ ನಿರ್ವಹಿಸಿದ್ದಾರೆ. ರಾಹುಲ್ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದರೆ ಹೆಚ್ಚುವರಿಯಾಗಿ ಮತ್ತೊಬ್ಬ ವಿಕೆಟ್ ಕೀಪರ್ ಅನ್ನು ತಂಡಕ್ಕೆ ತೆಗೆದುಕೊಳ್ಳುತ್ತೇವೆ ಎಂದರು.

ಬ್ಯಾಟಿಂಗ್ ಕ್ರಮಾಂಕವನ್ನು ಮತ್ತಷ್ಟು ಬಲ ಪಡಿಸಲು ಸಾಧ್ಯವಾಗುತ್ತದೆ. ಈ ಸಂದರ್ಭದಲ್ಲಿ ವಿಕೆಟ್ ಕೀಪರ್ ಸ್ಥಾನದಿಂದ ರಾಹುಲ್‍ರನ್ನು ತಪ್ಪಿಸುವ ಅಗತ್ಯವಿಲ್ಲ. ಕಾರಣ ಆಸೀಸ್ ವಿರುದ್ಧದ ಆಡುವ 11ರ ಬಳಗವನ್ನು ನಾನು ಮುಂದಿನ ಟೂರ್ನಿಗೆ ಬದಲಿಸುವ ಅಗತ್ಯವಿರುವುದಿಲ್ಲ. 2003ರ ವಿಶ್ವಕಪ್ ನಲ್ಲಿ ರಾಹುಲ್ ದ್ರಾವಿಡ್ ವಿಕೆಟ್ ಕೀಪರ್ ಆಗಿದ್ದನ್ನು ನೋಡಿದ್ದೇವೆ. ಆ ವೇಳೆ ಅವರು ಕೀಪರ್ ಆದ ಕಾರಣ ತಂಡ ಸಮತೋಲನ ಸಾಧಿಸಿತ್ತು. ಈ ಕಾರಣದಿಂದಲೇ ಕೀಪರ್ ಆಗಿ ಕೆಎಲ್ ರಾಹುಲ್ ಮುಂದುವರಿಯುತ್ತಾರೆ ಎಂದು ತಮ್ಮ ಅಭಿಪ್ರಾಯವನ್ನು ಮುಂದಿಟ್ಟರು.

Share This Article
Leave a Comment

Leave a Reply

Your email address will not be published. Required fields are marked *