ಉತ್ತಮ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟುತ್ತೇವೆ – ಕೊಹ್ಲಿ

Public TV
2 Min Read

ನವದೆಹಲಿ: ನಾಳೆ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನು ಕಟ್ಟುತ್ತೇವೆ ಎಂದು ಆರ್.ಸಿ.ಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ನಾಳೆ ಕೋಲ್ಕತ್ತಾದಲ್ಲಿ ಐಪಿಎಲ್ 2020 ರ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ತಂಡಗಳು ತಮಗೆ ಬೇಕಾದ ಆಟಗಾರರು ಬಿಡ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ನಡೆಸಿವೆ. 971 ಮಂದಿಯ ಪಟ್ಟಿಯನ್ನು 332ಕ್ಕೆ ಇಳಿಕೆ ಮಾಡಿ ಐಪಿಎಲ್ ಆಡಳಿತ ಮಂಡಳಿ ಪಟ್ಟಿಯನ್ನು ತಂಡದ ಫ್ರಾಂಚೈಸಿಗಳಿಗೆ ನೀಡಿದೆ. ಈ ಪಟ್ಟಿಯಲ್ಲಿ ಭಾರತದ 19 ಮಂದಿ ಆಟಗಾರರು ಹಾಗೂ ಫ್ರಾಂಚೈಸಿಗಳು ಮನವಿ ಮಾಡಿದ 24 ಮಂದಿ ಕ್ರಿಕೆಟಿಗರು ಸೇರಿದ್ದಾರೆ.

ಈಗ ಈ ಹರಾಜು ಪ್ರಕ್ರಿಯೆ ವಿಚಾರವಾಗಿ ವಿಡಿಯೋವೊಂದನ್ನು ಮಾಡಿರುವ ವಿರಾಟ್ ಕೊಹ್ಲಿ, ವಿಡಿಯೋದಲ್ಲಿ ಎಲ್ಲಾ ನನ್ನ ಆರ್‍ಸಿಬಿ ಅಭಿಮಾನಿಗಳಿಗೂ ನಮಸ್ಕಾರ ಮುಂಬರುವ ಐಪಿಎಲ್ ಆವೃತ್ತಿಗಾಗಿ ಹರಾಜು ಪ್ರಕ್ರಿಯೆ ನಡೆಯುತ್ತಿರುವುದು ನಿಮಗೆ ಗೊತ್ತಿದೆ. ನೀವು ನಮ್ಮ ತಂಡದ ಜೊತೆ ಸದಾ ಇರುತ್ತೀರಿ ಎಂಬುದು ನನಗೆ ಗೊತ್ತಿದೆ. ತಂಡದ ಆಡಳಿತ ಮಂಡಳಿ ಮತ್ತು ಕೋಚ್‍ಗಳಾದ ಮೈಕ್ ಹೆಸ್ಸನ್ ಮತ್ತು ಸೈಮನ್ ಕ್ಯಾಟಿಚ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹರಾಜು ಪ್ರಕ್ರಿಯೆ ವಿಚಾರವಾಗಿ ನಾವು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಮುಂಬರುವ ಆವೃತ್ತಿಗಾಗಿ ಬೇಕಾಗಿರುವ ಆಟಗಾರರನ್ನು ಹರಾಜಿನಲ್ಲಿ ತೆಗೆದುಕೊಂಡು ಉತ್ತಮ ಮತ್ತು ಬಲಿಷ್ಠ ತಂಡ ಕಟ್ಟುತ್ತೇವೆ. ನಿಮ್ಮ ಪ್ರೀತಿಗೆ ನಾವು ಬೆಲೆ ಕಟ್ಟಲು ಆಗಲ್ಲ. ಇದೇ ರೀತಿ ಮುಂಬರುವ 2020 ರ ಆವೃತ್ತಿಯಲ್ಲೂ ನಮಗೆ ನೀವು ಬೆಂಬಲಿಸಬೇಕು ಎಂದು ಕೊಹ್ಲಿ ವಿಡಿಯೋದಲ್ಲಿ ಹೇಳಿದ್ದಾರೆ. ಕೊಹ್ಲಿ ಅವರ ಈ ವಿಡಿಯೋವನ್ನು ಆರ್.ಸಿ.ಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ.

ವಿರಾಟ್ ಕೊಹ್ಲಿ 2013 ರಿಂದ ಆರ್.ಸಿ.ಬಿ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದು, ಇಲ್ಲಿಯವರಿಗೆ ಕಪ್ ಗೆಲ್ಲುವಲ್ಲಿ ವಿಫಲವಾಗಿದ್ದಾರೆ. ಕಳೆದ ಕೆಲ ಆವೃತ್ತಿಗಳಲ್ಲಿ ನಿರಾಶದಾಯಕ ಆಟ ಪ್ರದರ್ಶನ ನೀಡಿರುವ ಬೆಂಗಳೂರು ತಂಡ 2016 ಫೈನಲಿಗೆ ಹೋಗಿ ಹೈದರಾಬಾದ್ ವಿರುದ್ಧ ಸೋತ ನಂತರ ಅಂಕಪಟ್ಟಿಯಲ್ಲಿ 2017 ರಲ್ಲಿ ಕೊನೆಯ ಸ್ಥಾನ, 2018 ರಲ್ಲಿ ಆರನೇ ಸ್ಥಾನ ಮತ್ತು 2019 ರಲ್ಲಿ ಮತ್ತೆ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇದನ್ನು ಓದಿ: ಯುವಿಗೆ 16 ಕೋಟಿ, ಬೆನ್‌ ಸ್ಟೋಕ್ಸ್‌ಗೆ 14.50 ಕೋಟಿ – 2014 ರಿಂದ 2019 ರವರಗಿನ ದುಬಾರಿ ಆಟಗಾರರ ಪಟ್ಟಿ

Share This Article
Leave a Comment

Leave a Reply

Your email address will not be published. Required fields are marked *