ಧೋನಿ ಜಪ ಬಿಟ್ಟು, ಪಂತ್‍ಗೆ ದಯೆ ತೋರಿ ಎಂದ ಕೊಹ್ಲಿ

Public TV
2 Min Read

ಹೈದರಾಬಾದ್: ಕಳಪೆ ಫಾರ್ಮ್ ನಿಂದ ಸತತ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಬೆಂಬಲಕ್ಕೆ ನಾಯಕ ಕೊಹ್ಲಿ ಆಗಮಿಸಿದ್ದು, ತಂಡದ ಆಯ್ಕೆ ಸಮಿತಿ ಪಂತ್ ಮೇಲೆ ಭರವಸೆಯಿಟ್ಟು, ವಿಶ್ವಾಸದಿಂದ ಅವಕಾಶ ನೀಡಿದೆ. ಅಭಿಮಾನಿಗಳು ಕೂಡ ಪಂತ್ ಕುರಿತು ದಯೆ ತೋರಬೇಕಿದೆ ಎಂದಿದ್ದಾರೆ.

ನಾಳೆ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೊಹ್ಲಿ, ಪಂತ್ ವೈಫಲ್ಯಗಳ ಕುರಿತು ಪ್ರಸ್ತಾಪಿಸಿದರು. ತಂಡದ ಆಯ್ಕೆ ಸಮಿತಿ ಪಂತ್ ಮೇಲೆ ವಿಶ್ವಾಸ ಹೊಂದಿದೆ. ಅಭಿಮಾನಿಗಳು ಕೂಡ ಪಂತ್ ವಿಫಲರಾದ ಸಂದರ್ಭದಲ್ಲಿ ಧೋನಿ ಎಂದು ಘೋಷಣೆ ಕೂಗದೆ ಅವರಿಗೆ ಬೆಂಬಲ ನೀಡಬೇಕು ಎಂದರು.

ಪಂತ್ ಸಾಮರ್ಥ್ಯದ ಕುರಿತು ತಮಗೆ ಪೂರ್ತಿ ವಿಶ್ವಾಸವಿದೆ. ಆತ ಮ್ಯಾಚ್ ವಿನ್ನರ್ ಆಟಗಾರನಾಗಿದ್ದು, ಆದರೆ ಕೆಲ ಸಂದರ್ಭದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಧೋನಿ ಎಂದು ಜಪ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ದೇಶಕ್ಕಾಗಿ ಆಡುವ ಪ್ರತಿಯೊಬ್ಬ ಆಟಗಾರನೂ ಕೂಡ ಜವಾಬ್ದಾರಿಯಿಂದ ಆಡುತ್ತಾನೆ. ದೇಶಕ್ಕಾಗಿ ಗೆಲುವು ಸಾಧಿಸಿಬೇಕು ಎಂಬ ಯೋಚನೆ ಇರುತ್ತದೆ. ಯಾವುದೇ ಆಟಗಾರ ಕೂಡ ಬೇಕು ಎಂದು ಅಂತಹ ಪರಿಸ್ಥಿತಿಯನ್ನು ಎದುರಿಸುವುದಿಲ್ಲ. ಈ ವೇಳೆ ಆಟಗಾರರಿಗೆ ಅಭಿಮಾನಿಗಳು ಬೆಂಬಲವಾಗಿ ನಿಲ್ಲಬೇಕು ಎಂದರು.

ಇದೇ ವೇಳೆ ರಿಷಬ್ ಪಂತ್ ಅವರು ಆರಂಭಿಕರಾಗಿ ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ನನ್ನ ಬಳಿ ಈ ಪ್ರಶ್ನೆಗೆ ಉತ್ತರವಿಲ್ಲ ಎಂದರು. ಏಕೆಂದರೆ ತಂಡದಲ್ಲಿರುವ ಆರಂಭಿಕ 4 ಬ್ಯಾಟ್ಸ್ ಮನ್‍ಗಳು ಯಾವ ಕ್ರಮಾಂಕದಲ್ಲಿಯಾದರೂ ಆಡಲು ಶಕ್ತರಾಗಿದ್ದಾರೆ. ಉದಾಹರಣೆಗೆ ವೃದ್ಧಿಮಾನ್ ಸಹಾ ಐಪಿಎಲ್ ನಲ್ಲಿ ಎಲ್ಲಾ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಅಲ್ಲದೇ ಆಯ್ಕೆ ಸಂದರ್ಭದಲ್ಲಿ ಎಲ್ಲಾ ಕ್ರಮಾಂಕದಲ್ಲಿಯೂ ಆಡಲು ಸಿದ್ಧರಾಗಲು ಸೂಚಿಸಿದ್ದೇವೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಸಿದ್ಧವಾಗಿದ್ದು, ಟಿ20 ಮಾದರಿಯಲ್ಲಿ ಯಾವುದೇ ತಂಡವನ್ನು ನಿರ್ಲಕ್ಷ್ಯ ಮಾಡುವುದಿಲ್ಲ ಎಂದರು.

ವಿಶ್ವಕಪ್ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಯಾವುದೇ ಸರಣಿಯಲ್ಲಿ ಆಡಿಲ್ಲ. ಪರಿಣಾಮ ಪಂತ್ ಹೆಚ್ಚಿನ ಅವಕಾಶ ಪಡೆದರೂ ಕಳಪೆ ಫಾರ್ಮ್ ಸಮಸ್ಯೆಯಿಂದ ಟೀಕೆಗೆ ಗುರಿಯಾಗಿದ್ದಾರೆ. ಅಲ್ಲದೇ ಹಲವು ಮಾಜಿ ಆಟಗಾರರು ಪಂತ್ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡುವಂತೆ ಬಹಿರಂಗ ಹೇಳಿಕೆ ನೀಡಿದ್ದಾರೆ. 2020ರ ಟಿ20 ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾ ಆಯ್ಕೆ ಸಮಿತಿ ಬಲಿಷ್ಠ ತಂಡದ ನಿರ್ಮಿಸುವ ಉದ್ದೇಶವನ್ನು ಹೊಂದಿದ್ದು, ಯುವ ಆಟಗಾರರಿಗೆ ಅವಕಾಶ ನೀಡಿ ಹಲವು ಪ್ರಯೋಗಗಳನ್ನು ನಡೆಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *