ಅಂಬಟಿ ರಾಯುಡು ಪರ ಬ್ಯಾಟ್ ಬೀಸಿದ ಕ್ಯಾಪ್ಟನ್ ಕೊಹ್ಲಿ

Public TV
2 Min Read

ಮುಂಬೈ: 2019ರ ವಿಶ್ವಕಪ್‍ಗೆ ಉತ್ತಮ ತಂಡದ ಸಿದ್ಧತೆಯಲ್ಲಿರುವ ನಾಯಕ ವಿರಾಟ್ ಕೊಹ್ಲಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗೆ ಅಂಬಟಿ ರಾಯುಡು ಅವರ ಸ್ಥಿರ ಪ್ರದರ್ಶನ ಪರಿಹಾರ ನೀಡಬಲ್ಲರು ಎಂದು ಹೇಳಿದ್ದಾರೆ. ಈ ಮೂಲಕ ರಾಯುಡು ಪರ ಬ್ಯಾಟ್ ಬೀಸಿದ್ದಾರೆ.

ಟೀಂ ಇಂಡಿಯಾ ಬ್ಯಾಟಿಂಗ್ ಕ್ರಮಾಂಕ ಉತ್ತಮವಾಗಿದ್ದು, ಆದರೆ 4ನೇ ಸ್ಥಾನಕ್ಕೆ ಆಟಗಾರನ ಆಯ್ಕೆ ಮಾತ್ರ ಸಮಸ್ಯೆ ಆಗಿದೆ. ಈ ಸ್ಥಾನದಲ್ಲಿ ಆಡಲು ರಾಯುಡು ಆಡಲು ಉತ್ತಮ ಆಟಗಾರನಾಗಿದ್ದು, ಆಯ್ಕೆ ಸಮಿತಿಯೂ ಕೂಡ ಇದೇ ಅಭಿಪ್ರಾಯ ಹೊಂದಿದೆ ಎಂದು ತಿಳಿಸಿದ್ದಾರೆ.

ವಿಶ್ವಕಪ್ ಗುರಿಯಾಗಿಸಿ ತಂಡದ ಸಿದ್ದತೆಯಲ್ಲಿರುವ ನಮಗೆ 4ನೇ ಕ್ರಮಾಂಕದ ಬ್ಯಾಟಿಂಗ್ ಮಾತ್ರ ಸಮಸ್ಯೆ ಆಗಿದೆ. ಈ ಸ್ಥಾನ ತುಂಬಲು ನಾವು ಹಲವು ಆಟಗಾರರಿಗೆ ಅವಕಾಶ ನೀಡಿದ್ದೇವೆ. ಆದರೆ ಆ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಆದರೆ ಏಷ್ಯಾಕಪ್ ಕ್ರಿಕೆಟ್‍ನಲ್ಲಿ ರಾಯುಡು ಪ್ರದರ್ಶನ ಉತ್ತಮವಾಗಿದ್ದು, ವಿಶ್ವಕಪ್ ವೇಳೆಗೆ ಹೆಚ್ಚಿನ ಅವಕಾಶ ನೀಡಲಾಗುವುದು. ವಿಶ್ವಕಪ್ ವೇಳೆಗೆ ಉಳಿದಿರುವ 18 ಪಂದ್ಯಗಳಿಂದ ಉತ್ತಮ ಬ್ಯಾಟಿಂಗ್ ಕ್ರಮಾಂಕವನ್ನು ಸಿದ್ದಪಡಿಸಲಾಗುವುದು ಎಂದು ತಿಳಿಸಿದರು.

ರಾಯುಡು ಅನುಭವಿ ಆಟಗಾರರಾಗಿದ್ದು, ಐಪಿಎಲ್ ಸೇರಿದಂತೆ ಸಾಕಷ್ಟು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತ ಪರ ಏಕದಿನ ಮಾದರಿಯಲ್ಲಿ ಉತ್ತಮ ದಾಖಲೆಯನ್ನ ಹೊಂದಿದ್ದಾರೆ. ಶೀಘ್ರವೇ ಬ್ಯಾಟಿಂಗ್ ಕ್ರಮಾಂಕವನ್ನು ಸಿದ್ಧಗೊಳಿಸುವುದಾಗಿ ತಿಳಿಸಿದರು.

2018 ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ರಾಯುಡು ಉತ್ತಮ ಪ್ರದರ್ಶನವನ್ನು ನೀಡಿದ್ದು, 43.00 ಸರಾಸರಿಯಲ್ಲಿ 602 ರನ್ ಗಳಿಸಿದ್ದರು. ಆದರೆ ಯೋಯೋ ಟೆಸ್ಟ್ ಪಾಸ್ ಮಾಡಲು ವಿಫಲರಾಗಿದ್ದ ರಾಯುಡು ಬಳಿಕ ಇಂಗ್ಲೆಂಡ್ ಟೂರ್ನಿಯಿಂದ ಹೊರ ಉಳಿದಿದ್ದರು. ಆದರೆ ಏಷ್ಯಾಕಪ್‍ಗೆ ಕಮ್‍ಬ್ಯಾಕ್ ಮಾಡುವ ಮೂಲಕ ಟೂರ್ನಿಯಲ್ಲಿ 6 ಇನ್ನಿಂಗ್ಸ್ ಗಳಲ್ಲಿ 43.75 ಸರಾಸರಿಯಲ್ಲಿ 175 ರನ್ ಗಳಿಸಿ ಮಿಂಚಿದ್ದರು.

ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಟೂರ್ನಿಯಲ್ಲಿ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕಕ್ಕೆ ಸಿದ್ಧತೆ ನಡೆಸಿದ್ದಾರೆ. ಇತ್ತ ವಿಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ತಂಡ ಪ್ರಕಟವಾಗಿದ್ದು ಯುವ ಆಟಗಾರ ರಿಷಬ್ ಪಂತ್ 12ರ ಬಳಗದಲ್ಲಿ ಸ್ಥಾನ ಪಡೆದಿದ್ದು, ಪಾದಾರ್ಪಣೆ ಮಾಡಲು ಸಿದ್ಧತೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *