ಪಶ್ಚಿಮ ಬಂಗಾಳ| ಹಿಂಸಾಚಾರಕ್ಕೆ ತಿರುಗಿದ ವಕ್ಫ್‌ ಪ್ರತಿಭಟನೆ – ವಾಹನಗಳಿಗೆ ಬೆಂಕಿ, ರೈಲುಗಳ ಮೇಲೆ ಕಲ್ಲು

Public TV
3 Min Read

ಕೋಲ್ಕತ್ತಾ: ವಕ್ಫ್ ಕಾಯ್ದೆಯ (Waqf Act) ವಿರುದ್ಧ ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್‌ನಲ್ಲಿ ಮುಸ್ಲಿಮರು (Muslims) ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ನಿಮ್ತಿತಾ ನಿಲ್ದಾಣದಲ್ಲಿ ನಿಂತಿದ್ದ ರೈಲಿನ (Rail) ಮೇಲೆ ಕಲ್ಲು ತೂರಾಟ ನಡೆ ಎರಡು ರೈಲನ್ನು ಜಖಂಗೊಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ನಡೆದಿತ್ತು. ಸಂಜೆ ಬಳಿಕ ನಡೆದ ಪ್ರತಿಭಟನೆ ಹಿಂಸಚಾರಕ್ಕೆ ತಿರುಗಿದೆ. ಘಟನೆಯ ಹಿನ್ನೆಲೆಯಲ್ಲಿ ಕನಿಷ್ಠ ಎರಡು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ದಾಳಿಯಲ್ಲಿ ಕೆಲವು ಪ್ರಯಾಣಿಕರು ಮತ್ತು ಏಳರಿಂದ ಹತ್ತು ಪೊಲೀಸರು ಗಾಯಗೊಂಡಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಗಡಿ ಭದ್ರತಾ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿ: ಅಮಿತ್ ಶಾ ಘೋಷಣೆ

ಅಲ್ಪಸಂಖ್ಯಾತರ ಪ್ರಾಬಲ್ಯ ಇರುವ ಮುರ್ಷಿದಾಬಾದ್ ಜಿಲ್ಲೆಯ ನಿಮ್ತಿತಾ ಮತ್ತು ಸುಟಿಯಲ್ಲಿ ಉದ್ವಿಗ್ನತೆ ಉಂಟಾಗಿತ್ತು. ನಿಮ್ತಿತಾ ರೈಲು ನಿಲ್ದಾಣದಲ್ಲಿ, ಪ್ರತಿಭಟನಾಕಾರರು ಗಂಟೆಗಟ್ಟಲೆ ರೈಲ್ವೆ ಹಳಿಗಳನ್ನು ತಡೆದು ರೈಲ್ವೇ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ರೈಲ್ವೆ ಪೊಲೀಸ್ ಪಡೆ ಸಿಬ್ಬಂದಿ ಲಾಠಿ ಪ್ರಹಾರ ನಡೆಸಬೇಕಾಯಿತು. ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದರು. ನಂತರ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿ, ಧ್ವಂಸಗೊಳಿಸಿದ್ದಾರೆ.  ಇದನ್ನೂ ಓದಿ: ತಹವ್ವೂರ್‌ ರಾಣಾ ಹಸ್ತಾಂತರವು ಮುಂಬೈ ದಾಳಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ದೊಡ್ಡ ಹೆಜ್ಜೆ : ಜೈಶಂಕರ್‌

 

ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಹಿಂಸಾಚಾರ ಮಾಡುವವರಿಗೆ ಎಚ್ಚರಿಕೆ ನೀಡಿದ್ದು, ಮುರ್ಷಿದಾಬಾದ್ ಮತ್ತು ಉತ್ತರ 24 ಪರಗಣಗಳ ಇತರ ಸ್ಥಳಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ತಕ್ಷಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಯ ವಿಡಿಯೋಗಳನ್ನು ಹಾಕಿ ಮಮತಾ ಸರ್ಕಾರದ ವಿರುದ್ಧ ಕಿಡಿಕಾರಿದೆ.

 

ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಒಂದು ನಿರ್ದಿಷ್ಟ ಗುಂಪಿನ ತೀವ್ರಗಾಮಿಗಳಿಂದ ಪ್ರತಿಭಟನೆಗಳ ಹೆಸರಿನಲ್ಲಿ ರಾಜ್ಯವು ದೊಡ್ಡ ಪ್ರಮಾಣದ ಹಿಂಸಾಚಾರ, ಅರಾಜಕತೆ ಮತ್ತು ಕಾನೂನುಬಾಹಿರತೆಯನ್ನು ನೋಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಭಾರತದ ಸಂವಿಧಾನವನ್ನು ವಿರೋಧಿಸುತ್ತೇವೆ ಮತ್ತು ದೇಶದ ಕಾನೂನನ್ನು ವಿರೋಧಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿರುವ ಈ ಜನರು ಬೀದಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ತಮ್ಮ ಇಚ್ಛೆಯಂತೆ ಧ್ವಂಸ ಮಾಡುತ್ತಿದ್ದಾರೆ ಎಂದು ಸಿಟ್ಟು ಹೊರಹಾಕಿದ್ದಾರೆ.

Share This Article