ದತ್ತಪೀಠಕ್ಕೆ ಸರ್ಕಾರಿ ಬಸ್ – ಪೂಜೆ ಮಾಡಿ ಸ್ವಾಗತಿಸಿಕೊಂಡ ಕಾಫಿನಾಡಿಗರು

Public TV
1 Min Read

ಚಿಕ್ಕಮಗಳೂರು: ದತ್ತಪೀಠಕ್ಕೆ ಸರ್ಕಾರಿ ಬಸ್ ಬಿಡಬೇಕೆಂಬ ಸ್ಥಳೀಯರು ಹಾಗೂ ಪ್ರವಾಸಿಗರ ಬಹುದಿನದ ಬೇಡಿಕೆ ಕೊನೆಗೂ ಈಡೇರಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಕೂಡ ಚಿಕ್ಕಮಗಳೂರಿನಿಂದ ದತ್ತಪೀಠ ಬಸ್ ಸೌಲಭ್ಯ ಇರಲಿಲ್ಲ. ಈ ಭಾಗದ ಜನ ಹಾಗೂ ಪ್ರವಾಸಿಗರು ಈ ಭಾಗಕ್ಕೆ ಬಸ್ ಬಿಡಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಆದರೆ ಕಿರಿದಾದ ಹಾಗೂ ಹಾವು-ಬಳುಕಿನ ಮೈಕಟ್ಟಿನ ರಸ್ತೆಯಾಗಿರುವುದರಿಂದ ಸರ್ಕಾರ ಬಸ್ ಸೌಲಭ್ಯ ಕಲ್ಪಿಸಿರಲಿಲ್ಲ.

ಗಿರಿ ಭಾಗದ ಅತ್ತಿಗುಂಡಿ, ಪಂಡರವಳ್ಳಿ, ಎನ್‍ಎಂಡಿಸಿ, ಬ್ಯಾಗದಹಳ್ಳಿ, ಮಹಲ್, ತಿಪ್ಪನಹಳ್ಳಿ ಎಸ್ಟೇಟ್ ಸೇರಿದಂತೆ ಹಲವು ಗ್ರಾಮದ ಜನ ಆಗೊಮ್ಮೆ-ಈಗೊಮ್ಮೆ ಬರುವ ಖಾಸಗಿ ಬಸ್ ಹಾಗೂ ಆಟೋ, ಜೀಪ್ ಗಳನ್ನೇ ಆಶ್ರಯಿಸಿದ್ದರು. ದೈನಂದಿನ ಕೆಲಸಕ್ಕೆ ನಗರ ಪ್ರದೇಶಗಳಿಗೆ ಬರುವ ಈ ಭಾಗದ ಜನ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಗ್ರಾಮೀಣ ಭಾಗದಿಂದ ಶಾಲಾ-ಕಾಲೇಜಿಗೆ ಬರುವ ಮಕ್ಕಳು ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದರು. ಆದ್ದರಿಂದ ಈ ಭಾಗದ ಜನ ಬಸ್‍ಗಾಗಿ ಸರ್ಕಾರಕ್ಕೆ ಹತ್ತಾರು ಮನವಿ ಸಲ್ಲಿಸಿದ್ದರು. ದತ್ತಪೀಠದ ಮಾರ್ಗದಲ್ಲಿ ಕಿರಿದಾಗಿದ್ದ ರಸ್ತೆಯನ್ನು ಸರ್ಕಾರ ಅಗಲೀಕರಣ ಮಾಡಿದ್ದು, ಈಗ ದತ್ತಪೀಠಕ್ಕೆ ಬಸ್ ಸೌಲಭ್ಯ ಕಲ್ಪಿಸಿದ್ದು ಸ್ಥಳೀಯರಲ್ಲಿ ಸಂತಸ ಮೂಡಿದೆ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸಂಚರಿಸುವ ಬಸ್ಸಿಗೆ ಸಚಿವ ಸಿ.ಟಿ ರವಿ ಚಾಲನೆ ನೀಡಿದ್ದಾರೆ.

ತಮ್ಮ ಮಾರ್ಗಕ್ಕೆ ಬಸ್ ಬಂದ ಖುಷಿಗೆ ಈ ಮಾರ್ಗದ ಗ್ರಾಮಸ್ಥರೆಲ್ಲಾ ಬಸ್ಸಿಗೆ ಪೂಜೆ ಮಾಡಿ ಸ್ವಾಗತಿಸಿಕೊಂಡಿದ್ದು, ಬಳಿಕ ದತ್ತಪೀಠದಲ್ಲೂ ಪೂಜೆ ಸಲ್ಲಿಸಲಾಗಿದೆ. ತಮ್ಮ ಮಾರ್ಗಕ್ಕೆ ಬಸ್ ಬಂದಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಭಾಗದಲ್ಲಿ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರೇ ಹೆಚ್ಚಿದ್ದರು. ಅವರ ನಗರ ಪ್ರದೇಶಕ್ಕೆ ಬರಬೇಕಂದರೆ ಖಾಸಗಿ ಜೀಪ್, ಆಟೋಗಳಿಗೆ ಅವರು ಕೇಳಿದಷ್ಟು ಹಣವನ್ನು ನೀಡಬೇಕಿತ್ತು. ಈಗ ಸರ್ಕಾರ ಬಸ್ ಬಿಟ್ಟಿರುವುದರಿಂದ ಸ್ಥಳೀಯರಲ್ಲಿ ಸಂತಸ ಮನೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *