ಅಘನಾಶಿನಿ ಆಕ್ರೋಶಕ್ಕೆ ಕೊಚ್ಚಿ ಹೋದ ಬ್ರಿಡ್ಜ್- 1 ಲಕ್ಷ ವೆಚ್ಚದಲ್ಲಿ ಗ್ರಾಮಸ್ಥರಿಂದ್ಲೇ ತಾತ್ಕಾಲಿಕ ಸೇತುವೆ

Public TV
1 Min Read

– ಮರ, ಹಲಗೆಯಿಂದ ಕಟ್ಟೇ ಬಿಟ್ಟರು ಜೀವನ ಸೇತುವೆ

ಕಾರವಾರ: ಕರಾವಳಿ ಭಾಗದಲ್ಲಿ ಪ್ರವಾಹ ಬಂದು ಹಲವು ಊರುಗಳು ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿವೆ. ಅದರಲ್ಲೂ ಉತ್ತರ ಕನ್ನಡದಲ್ಲಿ ಅಘನಾಶಿನಿ ಆಕ್ರೋಶಕ್ಕೆ ಹಲವು ಗ್ರಾಮಗಳು ಜಲಾವೃತಗೊಂಡು, ಸೇತುವೆಗಳು ಕೊಚ್ಚಿಕೊಂಡು ಹೋಗಿದೆ.

ಜಿಲ್ಲೆಯ ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಸಂತೆಗುಳಿ ಬಳಿಯ ಗ್ರಾಮದಲ್ಲಿ ಅಘನಾಶಿನಿ ನದಿ ಹರಿದು ಹೋಗುತ್ತದೆ. ಆದ್ದರಿಂದ ನದಿಯ ಪ್ರವಾಹದಿಂದಾಗಿ ಗ್ರಾಮದಲ್ಲಿದ್ದ ತೂಗು ಸೇತುವೆ ಕೊಚ್ಚಿಹೋಗಿತ್ತು. ಈ ಹಿನ್ನೆಲೆಯಲ್ಲಿ ಬಂಗಣೆ, ಕಲವೆ, ಮೊರಸೆ ಗ್ರಾಮಕ್ಕೆ ಹೊರಗಿನ ಸಂಪರ್ಕ ಸಂಪೂರ್ಣ ಕಡಿದು ಹೋಗಿತ್ತು.

ಈ ಹಿಂದೆಯೇ ಗ್ರಾಮಸ್ಥರು ಸರ್ಕಾರಕ್ಕೆ ಸೇತುವೆ ನಿರ್ಮಿಸಿ ಕೊಡಿ ಎಂದು ಮನವಿ ಕೊಟ್ಟಿದ್ದರು. ಆದರೆ ಈ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಎಷ್ಟೇ ಬಾರಿ ಮನವಿ ಮಾಡಿದರೂ ಸ್ಪಂದಿಸದ ಸರ್ಕಾರದಿಂದ ಬೇಸತ್ತಿದ್ದ ಗ್ರಾಮಸ್ಥರು ತಮ್ಮ ಕೈಯಿಂದ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿ, ಯಾರ ಸಹಾಯವನ್ನೂ ಬೇಡದೇ ಮರದ ಸೇತುವೆ ನಿರ್ಮಾಣ ಮಾಡಿದ್ದಾರೆ.

ಊರಿನ ಜನರಿಂದ ಹಣವನ್ನು ಸಂಗ್ರಹಿಸಿ ತಾತ್ಕಾಲಿಕ ಸೇತುವೆ ಕಟ್ಟಿ, ಗ್ರಾಮಸ್ಥರು ಓಡಾಟ ನಡೆಸುತ್ತಿದ್ದಾರೆ. ಅಲ್ಲದೆ ತಮ್ಮ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳಿಗೆ ಹಾಗೂ ಸರ್ಕಾರದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ನಮ್ಮ ನೆರವಿಗೆ ಬಂದಿಲ್ಲ. ಈಗಾಗಲೇ ಹೊಲ, ಗದ್ದೆ, ತೋಟಗಳು ಪ್ರವಾಹಕ್ಕೆ ಹಾನಿಗೊಳಗಾಗಿ ಸಂಪೂರ್ಣ ನಾಶವಾಗಿದೆ. ಯಾರೂ ನಮ್ಮ ಸಹಾಯಕ್ಕೆ ಬಾರದ ಕಾರಣಕ್ಕೆ ನಾವೇ ಹಣವನ್ನು ಸಂಗ್ರಹಿಸಿ ತಾತ್ಕಾಲಿಕ ಸೇತುವೆ ಕಟ್ಟಿದ್ದೇವೆ. ಈ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳು ಗಮನಹರಿಸಿ ಗ್ರಾಮದಲ್ಲಿ ಸೇತುವೆ ನಿರ್ಮಿಸಿ ಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *