ಮಹಾತ್ಮಾ ಗಾಂಧೀಜಿಯವರ ಕನಸನ್ನ ನನಸು ಮಾಡಿದ ಕೋಟೆನಾಡಿನ ಗ್ರಾಮ

Public TV
1 Min Read

ಚಿತ್ರದುರ್ಗ: ಗ್ರಾಮೀಣಾಭಿವೃದ್ಧಿಯೇ ದೇಶ ಅಭಿವೃದ್ಧಿ ಅಂತ ಮಾಹತ್ಮಾ ಗಾಂಧೀಜಿ ಹೇಳಿದ್ದಾರೆ. ಆದರೆ ಇಂದಿಗೂ ಗ್ರಾಮೀಣ ಭಾಗದ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿದರೆ ಎಲ್ಲಿಯೂ ಅಭಿವೃದ್ಧಿಯಾಗಲಿಲ್ಲ. ಆದರೆ ಕೋಟೆನಾಡಿನ ಗ್ರಾಮವೊಂದು ನಗರ ಮಾದರಿಯಲ್ಲಿ ಅಭಿವೃದ್ಧಿ ಕಂಡಿದೆ.

ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡ ಚೆಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ದೊಡ್ಡ ಬೀರನಹಳ್ಳಿ ನಗರದಂತೆ ಅಭಿವೃದ್ಧಿಯಾಗಿದೆ. ಇಲ್ಲಿ ಗ್ರಾಮದ ಜನರ ಸಹಕಾರದೊಂದಿಗೆ ಗ್ರಾಮ ಪಂಚಾಯತಿ ಸದಸ್ಯರು ಈ ಗ್ರಾಮೀಣಾಭಿವೃದ್ಧಿಗೆ ಶ್ರಮಿಸಿದ್ದಾರೆ. ಪರಿಣಾಮ ಮಾಹತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಇಲ್ಲಿ ಮಾಡಿಸಲಾಗಿದೆ.

ಗಲ್ಲಿ ಗಲ್ಲಿಯಲ್ಲೂ ಗುಣಮಟ್ಟದ ಸಿಮೆಂಟ್ ರಸ್ತೆಗಳು, ರಸ್ತೆಗಳ ತಿರುವಿನಲ್ಲಿ ಮಾರ್ಗ ಸೂಚಿಸುವ ನಾಮಪಲಕಗಳು ಹಾಗು ಚರಂಡಿ, ನೀರು ಸೇರಿದಂತೆ ಸಕಲ ಮೂಲಭೂತ ಸೌಲಭ್ಯಗಳೂ ಇಲ್ಲಿ ಲಭ್ಯವಿದೆ. ಹೀಗಾಗಿ ನಗರಗಳಲ್ಲೇ ಆಗದ ಅಭಿವೃದ್ಧಿ ಈ ಊರಲ್ಲಿ ಆಗಿದ್ದಕ್ಕೆ ಗ್ರಾಮೀಣಾಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ಹೊಂದಿದ್ದೇ ಇದಕ್ಕೆ ಕಾರಣ ಅಂತ ಸ್ಥಳೀಯ ಓಂಕಾರಮೂರ್ತಿ ಹೇಳಿದ್ದಾರೆ.

ಗ್ರಾಮದ ರಸ್ತೆಗಳಲ್ಲಿ ಅಳವಡಿಸಿದ್ದ ನಾಮಫಲಕಗಳು ಎಲ್ಲರ ಗಮನ ಸೆಳೆಯುತ್ತಿವೆ. ಗ್ರಾಮದಲ್ಲಿ ಕ್ರಾಸ್ ಹಾಗೂ ದೇಗುಲ ಸೇರಿದಂತೆ ಇತರೆ ಮಾಹಿತಿಯನ್ನು ನಾಮಫಲಕದ ಮೂಲಕ ತಿಳಿಯಬಹುದಾಗಿದೆ. ಅಂತೆಯೇ ನಾಮಫಲಕಗಳಲ್ಲಿ ಕಾನೂನು, ಪರಿಸರ ಸೇರಿದಂತೆ ಇತರೆ ಉತ್ತಮ ನುಡಿಗಳನ್ನು ಬರೆಸಲಾಗಿದೆ. ನಗರ ಪ್ರದೇಶಗಲ್ಲಿ ಕೆಲವೆಡೆ ಅಳವಡಿಸಿದ್ದನ್ನು ಕಂಡಾಗ ನಮ್ಮೂರಲ್ಲೇಕೆ ಈ ಮಾದರಿಯ ನಾಮಫಲಕಗಳನ್ನು ಅಳವಡಿಸಬಾರದು ಎಂದು ಈ ನಿರ್ಧಾರ ಕೈಗೊಂಡೆವು ಎಂದು ಗ್ರಾ.ಪಂ. ಸದಸ್ಯ ಧನಂಜಯ ತಿಳಿಸಿದ್ದಾರೆ.

ಕೋಟೆನಾಡು ಚಿತ್ರದುರ್ಗದ ದೊಡ್ಡ ಬೀರನಹಳ್ಳಿ ಈಗ ಅಭಿವೃದ್ಧಿಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ ಇತರೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮತ್ತು ಸದಸ್ಯರು ನಮ್ಮೂರಲ್ಲೇಕೆ ಈ ರೀತಿ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದರ ಬಗ್ಗೆ ಚಿಂತಿಸಬೇಕಿದೆ. ಆ ಮೂಲಕ ಗಾಂಧೀಜಿಯವರ ಗ್ರಾಮ ಭಾರತದ ಕನಸು ನನಸಾಗಿಸಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *