ಧೀಮಂತ ಜನ ನಾಯಕ: ಪ್ರಚಾರ ಸಮಯದಲ್ಲಿ ತಂದೆ ಸಾಧನೆಯನ್ನು ಗುಣಗಾನ ಮಾಡಿದ ವಿಜಯೇಂದ್ರ

Public TV
2 Min Read

ಹಾಸನ: ಸಿದ್ದಗಂಗಾ ಶ್ರೀಗಳನ್ನು ನಡೆದಾಡುವ ದೇವರು ಎಂದು ಎಲ್ಲರೂ ಪೂಜಿಸುತ್ತೇವೆ. ಹಾಗೆಯೇ ಯಡಿಯೂರಪ್ಪ ಅವರು ನಡೆದಾಡುವ ಸರ್ಕಾರ ಎಂಬಂತೆ ಮನೆಗೆ ತಲುಪಿಸಿದ್ದು, ಅವರನ್ನು ಎಲ್ಲರೂ ಧೀಮಂತ ಜನ ನಾಯಕ ಎಂದು ಕರೆಯುತ್ತಾರೆ ಎಂದು ತಂದೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಗುಣಗಾನ ಮಾಡಿದರು.

ಹಾಸನ ನಗರದ ಹೆಚ್‍ಎಂಟಿ ಸಮುದಾಯ ಭವನದಲ್ಲಿ ಆಯೋಜಿದ್ದ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹಳೆ ಮೈಸೂರು ಭಾಗದ ಈ ವಿಧಾನಪರಿಷತ್ ಚುನಾವಣೆ, ವಿಧಾನಸಭೆ ಚುನಾವಣೆಗೆ ಪೂರಕವಾಗಲಿದೆ. ನಿನ್ನೆ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೆಂದೂ ಇರದ ಉತ್ಸಾಹ ಕಂಡಿದ್ದೇನೆ. ನಮ್ಮ ಕಾರ್ಯಕರ್ತರು ಸಾಕಷ್ಟು ಉತ್ಸಾಹದಲ್ಲಿ ಇದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಂತ್ರಿ, ಮುಖ್ಯಮಂತ್ರಿ ಯಾವುದನ್ನೂ ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡ್ತಿಲ್ಲ: ವಿಜಯೇಂದ್ರ 

ವಿಧಾನಪರಿಷತ್ ಚುನಾವಣೆಯನ್ನು ನಮ್ಮ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಅದೆಷ್ಟು ಪಾದಯಾತ್ರೆ, ಅದೆಷ್ಟು ಸೈಕಲ್ ಜಾಥಾ ಹೋರಾಟ ಮಾಡಿದ್ದಾರೆ. ಇವೆಲ್ಲಾ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಮಾಡಿದ್ದಲ್ಲ. ಜನರ ನೋವಿಗೆ ಸ್ಪಂದಿಸಲು ನೆರವಾಗಲು ಹೋರಾಟ ಮಾಡಿದ್ದು, ಅಂತಹ ಧೀಮಂತ ನಾಯಕ ಬಿ.ಎಸ್.ವೈ ಎಂದರು.

ಯಡಿಯೂರಪ್ಪ ಅವರು ಕೊಟ್ಟ ಯೋಜನೆಯನ್ನು ಜನರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಆಡುಮುಟ್ಟದ ಸೊಪ್ಪಿಲ್ಲ ಎನ್ನುವ ರೀತಿಯಲ್ಲಿ ಯಡಿಯೂರಪ್ಪ ಅವರು ಮುಟ್ಟದ ಕ್ಷೇತ್ರವೇ ಇಲ್ಲ. ಹೀಗೆ ಅವರು ಎಲ್ಲರಿಗೂ ಅನುಕೂಲವಾಗುವ ಕೆಲಸ ಮಾಡಿದ್ದಾರೆ. ಹಿಂದೆ ಬಿಜೆಪಿ ಎಂದರೆ ನಗರಕ್ಕೆ ಸೀಮಿತ ಎಂದು ವಿಪಕ್ಷಗಳು ಮಾತನಾಡುತ್ತಿದ್ದರು. ಈಗ ಹಳ್ಳಿ, ಗಲ್ಲಿಯಲ್ಲಿ ಬಿಜೆಪಿ ಬೆಳೆದು ನಿಂತಿದೆ. ಬಿಜೆಪಿ ಅಧಿಕಾರಕ್ಕೆ ಬರೋದು ಕನಸು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರು. ಆದರೆ ಬಿಜೆಪಿ ಇವತ್ತು ಕರ್ನಾಟಕದಿಂದ ಕಾಶ್ಮೀರದವರೆಗೆ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಕೋರ್ಟ್ ವಿಚಾರಣೆ ವೇಳೆ ಬಿಟ್ರು ನೂರಾರು ಜಿರಳೆ 

ಇದೇ ವೇಳೆ ಕಾಂಗ್ರೆಸ್ ಸ್ಥಿತಿ ಏನಾಗಿದೆ. ಅತಿ ಹೆಚ್ಚು ಸಂಸತ್ ಸ್ಥಾನ ಹೊಂದಿದ್ದ ಕಾಂಗ್ರೆಸ್ ಈಗ ಕೇವಲ 42ಕ್ಕೆ ಕುಸಿದಿದೆ. ಪ್ರತಿ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಳ್ಳುವ ರಾಹುಲ್‍ಗಾಂಧಿ ಅವರ ಕುಟುಂಬ ಸದಾಕಾಲ ನಿಲ್ಲುತ್ತಿದ್ದ ಕ್ಷೇತ್ರವನ್ನು ಬಿಡಬೇಕಾಯ್ತು. ಅವರು ಕೇರಳಕ್ಕೆ ಹೋಗಿ ಚುನಾವಣೆಗೆ ನಿಂತರು. ಈಗ ಕಾಂಗ್ರೆಸ್ ದೇಶದ ಎಲ್ಲೂ ಚುನಾವಣೆಗೆ ನಿಲ್ಲಲಾಗದ ಸ್ಥಿತಿ ತಲುಪಿದೆ ಎಂದು ಟೀಕಿಸಿದರು.

ನಮ್ಮ ಪ್ರಧಾನಿ ಭವಿಷ್ಯದ ಭಾರತ ಹೇಗಿರಬೇಕು ಎಂದು ಯೋಚನೆ ಮಾಡುತ್ತಾರೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರ, ಹಗರಣ ಇಲ್ಲದೆ ಸರ್ಕಾರ ನಡೆದಿದೆ. ಭ್ರಷ್ಟಾಚಾರ ರಹಿತವಾಗಿ ಸರ್ಕಾರ ನಡೆಸಬಹುದು ಎಂದು ನಮ್ಮ ಪ್ರಧಾನಿ ತೋರಿಸಿಕೊಟ್ಟಿದ್ದಾರೆ ಎಂದು ನರೇಂದ್ರ ಮೋದಿ ಅವರನ್ನು ಹೊಗಳಿದರು.

 

Share This Article
Leave a Comment

Leave a Reply

Your email address will not be published. Required fields are marked *