ವಿಜಯಪುರ: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಜಿಲ್ಲೆಯ ಮುದ್ದೇಬಿಹಾಳ ನಾಲತವಾಡ ಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಸವನಬಾಗೇವಾಡಿ ಪಟ್ಟಣದ ಇಂದಿರಾ ನಗರ ನಿವಾಸಿಗಳಾದ ಸುಮನ ಬಂಗಾರಿ ಹಾಗೂ ಸೋಹೆಲ್ ಇನಾಮದಾರ ಬಂಧಿತ ಆರೋಪಿಗಳು. ಕೆಎ 28, ಇಎಸ್ 9164 ಬೈಕ್ ಮೇಲೆ ನಾಲತವಾಡ ಪಟ್ಟಣಕ್ಕೆ ಬಂದಿದ್ದಾಗ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಖೋಟಾ ನೋಟು ಚಲಾವಣೆ ಜಾಲದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಆಧಾರದ ಮೇಲೆ ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಪಾನ್ ಶಾಪ್‌ನಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಇದರ ಹಿಂದೆ ದೊಡ್ಡ ಜಾಲವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಮುದ್ದೇಬಿಹಾಳ ಪಿಎಸ್‍ಐ ಮಲ್ಲಪ್ಪ ಮಡ್ಡಿ, ಸಿಪಿಐ ರವಿಕುಮಾರ ಕಪ್ಪತ್ತನವರ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಮುಂದುವರಿಸಲಾಗಿದೆ.
ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಂಧಿತರಿಂದ 100 ರೂ. ಮುಖಬೆಲೆಯ 4500 ರೂ. ಖೋಟಾ ನೋಟು, ಬೈಕ್ ಹಾಗೂ ಬ್ಯಾಗ್ ವಶಕ್ಕೆ ಪಡೆದಿದ್ದಾರೆ.