ಡಿಕೆಶಿಯ ಮಾನನಷ್ಟ ಮೊಕದ್ದಮೆ ಬಗ್ಗೆ ಕೋರ್ಟಿನಲ್ಲಿ ಉತ್ತರ ನೀಡುತ್ತೇನೆ: ಯತ್ನಾಳ್

Public TV
2 Min Read

-ಕರ್ನಾಟಕದ ಬ್ರಹ್ಮ ಸಿಎಂ ಬಿಎಸ್‍ವೈ

ವಿಜಯಪುರ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕನಕಪುರ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, 204 ಕೋಟಿ ಮೊತ್ತದ ಪರಿಹಾರ ಕೋರಿದ್ದಾರೆ. ಈ ವಿಚಾರಕ್ಕೆ ಪತ್ರಿಕ್ರಿಯಿಸಿರುವ ಯತ್ಮಾಳ್ ಇದರ ಬಗ್ಗೆ ಕೋರ್ಟ್ ನಲ್ಲಿ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರ ಮಾನನಷ್ಟ ಮೊಕದ್ದಮೆ ಬಗ್ಗೆ ನಾನು ಮಾತನಾಡುವುದಿಲ್ಲ. ಅದು ಕೋರ್ಟ್ ನಲ್ಲಿರುವ ವಿಷಯ ಈಗ ಅದರ ಬಗ್ಗೆ ಮಾತಾಡಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತೆ ಎಂದು ಹೇಳಿದರು.

ಇದೇ ವೇಳೆ ಕೇಂದ್ರ ಸರ್ಕಾರದಿಂದ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ 370 ಕಲಂ ರದ್ದು ಮಾಡಿರುವ ವಿಚಾರದ ಬಗ್ಗೆ ಮಾತನಾಡಿ, ಕೇಂದ್ರದ ಈ ನಿರ್ಧಾರವನ್ನು ಸ್ವಾಗತ ಮಾಡುತ್ತೇವೆ. ದೇಶದ ಜನರು ಭಾರತದ ಯಾವುದೇ ಮೂಲೆಯಲ್ಲಿ ಬೇಕಾದರೂ ಆಸ್ತಿ ಹೊಂದಲು ಅವಕಾಶ ಇರಬೇಕು ಎನ್ನುವ ಸರ್ದಾರ್ ಪಟೇಲ್ ಮತ್ತು ಶ್ಯಾಮ್ ಪ್ರಸಾದ ಮುಖರ್ಜಿ ಕನಸು ನನಸು ಮಾಡಿದ್ದಾರೆ. ನಮಗೆ ಲೋಕಸಭೆಯಲ್ಲಿ ಬಹುಮತ ಬಂದಿರುವದರಿಂದ ಭರವಸೆ ಈಡೇರಿಸಲಾಗಿದೆ. ಇವತ್ತು ಸಂಜೆ ಸಿದ್ದೇಶ್ವರ ದೇವಸ್ಥಾನ ಬಳಿ ವಿಜಯೋತ್ಸವ ಆಚರಿಸಲಾಗುವುದು ಎಂದು ತಿಳಿಸಿದರು.

ಸಿಎಂ ಆದ ಬಳಿಕ ಬಿ.ಎಸ್ ಯೂಡಿಯೂರಪ್ಪ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆಹಾನಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ. ಜಲಾವೃತ ಗೊಂಡಿರುವ ಹಳ್ಳಿಗಳ ಜನರಿಗೆ ಸೂಕ್ತ ಸೌಲಭ್ಯ ಒದಗಿಸುವ ಕೆಲಸ ಸಿಎಂ ಮಾಡಲಿದ್ದಾರೆ ಎಂದು ಯತ್ನಾಳ್ ಭರವಸೆ ನೀಡಿದರು.

ಸಿಎಂ ಏಕಾಂಗಿ ಸಂಚಾರ ಹಾಗೂ ಒನ್ ಮ್ಯಾನ್ ಶೋ ವಿಚಾರವಾಗಿ ಮಾತನಾಡಿ, ಕೇಂದ್ರದ ನಾಯಕರ ಜೊತೆಗೆ ಚರ್ಚಿಸಿ ಸಿಎಂ ಖಾತೆ ಹಂಚಿಕೆ ಮಾಡುತ್ತಾರೆ. ಬ್ರಹ್ಮ ಇದ್ರೆ ಸೃಷ್ಠಿಕರ್ತ ಇದ್ದಂತೆ ಹಾಗೆಯೇ ಸಿಎಂ ಬಿಎಸ್‍ವೈ ಕೂಡ ಬ್ರಹ್ಮ. ಸೃಷ್ಠಿಯ ಸೃಷ್ಠಿಕರ್ತ ಬ್ರಹ್ಮ, ಹಾಗೆ ಕರ್ನಾಟಕದ ಬ್ರಹ್ಮ ಸಿಎಂ ಬಿಎಸ್‍ವೈ. ಮುಖ್ಯಮಂತ್ರಿಯೇ ಕರ್ನಾಟಕದ ನಂಬರ್ ಒನ್ ಆಗಿರುತ್ತಾರೆ. ಅವರ ಅಡಿಯಲ್ಲೇ ಎಲ್ಲ ಮಂತ್ರಿಗಳು ಇರುತ್ತಾರೆ. ಹಾಗಾಗಿ ಶಾಸಕರುಗಳಿಗೆ ಮಂತ್ರಿಯಾಗುವ ಗಡಿಬಿಡಿ ಇಲ್ಲ. ಎಲ್ಲ ಇಲಾಖೆಗಳು ಸಿಎಂ ಅಡಿಯಲ್ಲೇ ಇರುವುದರಿಂದ ಅತಿವೃಷ್ಠಿಯ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *