ಕ್ರಿಕೆಟಿಗೆ ಟ್ಯಾಲೆಂಟ್ ಮುಖ್ಯವೇ ಹೊರತು ಬಾಡಿ ಅಲ್ಲ: ಟ್ರೋಲಾದ ವಿಜಯ್ ಶಂಕರ್

Public TV
2 Min Read

ನವದೆಹಲಿ: ಕ್ರಿಕೆಟ್‍ಗೆ ಟ್ಯಾಲೆಂಟ್ ಮುಖ್ಯವೇ ಹೊರತು ಬಾಡಿ ಮುಖ್ಯವಲ್ಲ ಎಂದು ಟೀಂ ಇಂಡಿಯಾ ಕ್ರಿಕೆಟರ್ ವಿಜಯ್ ಶಂಕರ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

28 ವರ್ಷದ ವಿಜಯ್ ಶಂಕರ್ ತಮ್ಮ ಬಾಡಿ ಬಿಲ್ಡ್ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಜಯ್ ಶಂಕರ್ ಎರಡು ಫೋಟೋಗಳನ್ನು ಹಂಚಿಕೊಂಡಿದ್ದು, ಒಂದರಲ್ಲಿ ಅವರ ಹಳೆಯ ನೋಟವು ಕಂಡುಬಂದರೆ, ಇನ್ನೊಂದರಲ್ಲಿ ಶರ್ಟ್ ಹಾಕದೆ ದೇಹವನ್ನು ತೋರಿಸಿದ್ದಾರೆ. ಈ ಫೋಟೋಗಳನ್ನು ನೋಡಿ, ಕೆಲವು ಕ್ರಿಕೆಟಿಗರು ಅವರನ್ನು ಹೊಗಳಿದರೆ, ಕೆಲ ನೆಟ್ಟಿಗರು ತಮ್ಮದೆ ಶೈಲಿಯಲ್ಲಿ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

“ಬೆವರು, ಸಮಯ ಮತ್ತು ತಪಸ್ಸು ಅವು ಖಂಡಿತವಾಗಿಯೂ ಫಲಿತಾಂಶವನ್ನು ನೀಡುತ್ತವೆ. ಮಂಗಳವಾರದ ಬದಲಾವಣೆ” ಎಂದು ವಿಜಯ್ ಶಂಕರ್ ತಮ್ಮ ಫೋಟೋಗಳನ್ನು ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ವಿಜಯ್ ಶಂಕರ್ ಫೋಟೋಗಳಿಗೆ ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಶ್ರೇಯಸ್ ಅಯ್ಯರ್ ಅವರು ಪ್ರತಿಕ್ರಿಯಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಭುವನೇಶ್ವರ್ ಕುಮಾರ್ ಬಾಡಿ ಬಿಲ್ಡಿಂಗ್ ಫೋಟೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದರು. ಆದರೆ ಈಗ ವಿಜಯ್ ಶಂಕರ್ ಅವರನ್ನು ಭರ್ಜರಿ ಟ್ರೋಲ್ ಮಾಡುತ್ತಿದ್ದಾರೆ.

ಯುವ ಪೀಳಿಗೆಗೆ ಜಿಮ್ ತರಬೇತಿಯನ್ನು ಪ್ರಾರಂಭಿಸಲು ಈಗ ನೀವು ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೀರಿ ಎಂದು ಪ್ರಭಾತ್ ನಿಗಮ್ ವ್ಯಂಗ್ಯವಾಡಿದ್ದಾರೆ. ಮೋನಿಷಾ ಉದಯ್ ರಿಟ್ವೀಟ್ ಮಾಡಿ, ಮುಂದಿನ ಕಾಲಿವುಡ್ ನಾಯಕ ಎಂದು ಕಾಲೆಳೆದಿದ್ದಾರೆ.

ವಿಜಯ್ ಶಂಕರ್ ಟೀಂ ಇಂಡಿಯಾ ಪರ ಈವರೆಗೆ 12 ಏಕದಿನ ಮತ್ತು 9 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಪಂದ್ಯಗಳಲ್ಲಿ 31.85 ಸರಾಸರಿಯಲ್ಲಿ 223 ರನ್ ಗಳಿಸಿರುವ ಅವರು 4 ವಿಕೆಟ್ ಪಡೆದಿದ್ದಾರೆ. ಟಿ-20ಯಲ್ಲಿ ಅವರು 25.25 ರ ಸರಾಸರಿಯಲ್ಲಿ 101 ರನ್ ಗಳಿಸಿದ್ದಾರೆ ಮತ್ತು 5 ವಿಕೆಟ್ ಪಡೆದಿದ್ದಾರೆ.

ಭಾರತದ 15 ಸದಸ್ಯರ ವಿಶ್ವಕಪ್ ತಂಡವನ್ನು ಘೋಷಿಸುವ ಸಮಯದಲ್ಲಿ, ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಎಂ.ಎಸ್.ಕೆ ಪ್ರಸಾದ್, “ಮೂರು ಆಯಾಮದ ಕೌಶಲ್ಯಗಳನ್ನು” ಉಲ್ಲೇಖಿಸಿ ತಂಡದಲ್ಲಿ ಶಂಕರ್ ಸ್ಥಾನವನ್ನು ಸಮರ್ಥಿಸಿಕೊಂಡಿದ್ದರು.

ಶಂಕರ್ ಆಯ್ಕೆಯಿಂದಾಗಿ ಕಡೆಗಣಿಸಲ್ಪಟ್ಟಿದ್ದ ಅಂಬಾಟಿ ರಾಯುಡು, ವಿಶ್ವಕಪ್ ವೀಕ್ಷಿಸಲು 3ಡಿ ಗ್ಲಾಸ್ ಖರೀದಿಸುತ್ತಿರುವೆ ಎಂದು ಟ್ವೀಟ್ ಮಾಡಿದ್ದರು. 2019ರ ವಿಶ್ವಕಪ್ ಟೂರ್ನಿಯಲ್ಲಿ ವಿಜಯ್ ಶಂಕರ್ ವಿಂಡೀಸ್ ವಿರುದ್ಧ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ. ನಂತರ ಹೆಬ್ಬೆರೆಳಿನ ಗಾಯದಿಂದಾಗಿ ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದರು.

Share This Article
Leave a Comment

Leave a Reply

Your email address will not be published. Required fields are marked *