ವಿಜಯ್ ದೇವರಕೊಂಡ ನಟನೆಯ ಹೊಸ ಚಿತ್ರದ ಅಪ್‌ಡೇಟ್‌

2 Min Read

ಸತತ ಯಶಸ್ವಿ ಚಿತ್ರಗಳನ್ನ ನೀಡುತ್ತಿರುವ ಪ್ರತಿಷ್ಠಿತ ಸಂಸ್ಥೆ ‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ, ಸ್ಟಾರ್ ಹಿರೋ ವಿಜಯ್ ದೇವರಕೊಂಡ (Vijay Deverakonda) ನಟನೆಯ ಹೊಸ ಚಿತ್ರ ‘SVC 59’ ಅನೌನ್ಸ್ ಆಗಿದೆ. ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಇದೀಗ ಇದೇ ಚಿತ್ರದ ಟೈಟಲ್ ಗ್ಲಿಂಪ್ಸ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ಡಿಸೆಂಬರ್ 22 ರಂದು ಸಂಜೆ 07:29ಕ್ಕೆ ರಿಲೀಸ್ ಆಗಲಿದೆ. ‘ರಾಜ ವಾರು ರಾಣಿ ಗಾರು’ ಚಿತ್ರದ ಮೂಲಕ ಗಮನ ಸೆಳೆದಿದ್ದ ಪ್ರತಿಭಾವಂತ ನಿರ್ದೇಶಕ ರವಿ ಕಿರಣ್ ಕೋಲಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಪ್ರೋಮೋ ಮೂಲಕ ಚಿತ್ರದ ನಾಯಕನ ವ್ಯಕ್ತಿತ್ವದ ಬಗ್ಗೆ ನಿರ್ದೇಶಕರು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಪಾತ್ರದ ಬಗ್ಗೆ ಹೇಳಿದ ನಿರ್ದೇಶಕರು ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ರವಿ ಕಿರಣ್ ಕೋಲಾ, “ಒಬ್ಬ ವ್ಯಕ್ತಿಯ ಬಗ್ಗೆ ಕಥೆ ಹೇಳಲು ನಾನು ಬಹಳ ದಿನಗಳಿಂದ ಕಾಯುತ್ತಿದ್ದೆ. ಆ ಪಾತ್ರ ನನ್ನ ನೆನಪಿನಲ್ಲೇ ಇತ್ತು. ಅವನು ನನಗೆ ಬಹಳ ವೈಯಕ್ತಿಕ, ಅವನನ್ನು ನೋಡುತ್ತಲೇ ನಾನು ಬೆಳೆದಿದ್ದೇನೆ. ಅವನು ಪರಿಪೂರ್ಣನಲ್ಲ, ಆದರೆ ವಾಸ್ತವಕ್ಕೆ ಹತ್ತಿರವಾಗಿದ್ದಾನೆ. ದೋಷಗಳುಳ್ಳವನು, ಕೋಪಿಷ್ಟ ಮತ್ತು ಘಾಸಿಗೊಳಗಾದವನು. ಅವನನ್ನು ದ್ವೇಷಿಸುವುದಕ್ಕಿಂತ ಹೆಚ್ಚಾಗಿ ನಾನು ಪ್ರೀತಿಸಿದ್ದೇನೆ. ಈ ಕಥೆಯನ್ನು ಹೇಳಲೇಬೇಕಿತ್ತು, ಶೀಘ್ರದಲ್ಲೇ ನೀವು ಅವನನ್ನು ಭೇಟಿಯಾಗಲಿದ್ದೀರಿ,” ಎಂದು ಪಾತ್ರದ ತೀವ್ರತೆಯನ್ನು ವಿವರಿಸಿದ್ದಾರೆ.

ಹಳ್ಳಿ ಬ್ಯಾಕ್ಡ್ರಾಪ್ನಲ್ಲಿ ಮಾಸ್ ಆಕ್ಷನ್ ಡ್ರಾಮಾ ಶೈಲಿಯಲ್ಲಿ ಈ ಸಿನಿಮಾ ಸಿದ್ಧಗೊಳಲಿದ್ದು, ಈ ಚಿತ್ರವನ್ನು ಪ್ಯಾನ್ ಇಂಡಿಯಾ ನಿರ್ಮಾಪಕರು ತೆರೆಗೆ ತರಲಿದ್ದಾರೆ. ನಾಯಕನಾಗಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ. ಅವರ ಜೊತೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ‘SVC 59’ ಚಿತ್ರದ ಕಿರು ಪ್ರೋಮೋ ಝಲಕ್ ಹೊರಬಿದ್ದಿದ್ದು, ಅಂತ್ಯದಲ್ಲಿ ರಕ್ತ ಮೆತ್ತಿದ ವಿಜಯ್ ದೇವರಕೊಂಡ ಅವರ ಕೈ ಮಾತ್ರ ಕಾಣಿಸಿಕೊಂಡಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ದಿಲ್ ರಾಜು, ಶಿರೀಶ್ ಈ ಚಿತ್ರದ ನಿರ್ಮಾಪಕರು. ಕಥೆ ಮತ್ತು ನಿರ್ದೇಶನ ರವಿ ಕಿರಣ್ ಕೋಲಾ ಅವರದ್ದು.

Share This Article