ಬೆಸ್ಕಾಂ ವ್ಯಾಪ್ತಿಯ 104 ಹಳ್ಳಿಗಳಲ್ಲಿ ನಾಳೆ ವಿದ್ಯುತ್ ಅದಾಲತ್

By
2 Min Read

ಬೆಂಗಳೂರು: ಗ್ರಾಮೀಣ ಭಾಗದ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಪರಿಹಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲು ‘ವಿದ್ಯುತ್ ಅದಾಲತ್’ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 104 ಹಳ್ಳಿಗಳಲ್ಲಿ ಶನಿವಾರ(ಜೂನ್ 18) ನಡೆಯಲಿದೆ.

ಬೆಸ್ಕಾಂನ ಆಡಳಿತ ನಿರ್ದೇಶಕರಿಂದ ಹಿಡಿದು ಹಿರಿಯ ಅಧಿಕಾರಿಗಳು ವಿದ್ಯುತ್ ಅದಾಲತ್‌ನಲ್ಲಿ ಖುದ್ದು ಭಾಗವಹಿಸಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಸೂಚಿಸಲಿದ್ದಾರೆ. ಇದರೊಂದಿಗೆ ಕಾಲಮಿತಿಯಲ್ಲಿ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರವನ್ನೂ ಒದಗಿಸಲಿದ್ದಾರೆ.

ಗ್ರಾಮೀಣ ಭಾಗದ ಜನರ ವಿದ್ಯುತ್ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎನ್ನುವ ಸದುದ್ದೇಶದಿಂದ ಪ್ರತಿ ತಿಂಗಳ ಮೂರನೇ ಶನಿವಾರ ವಿದ್ಯುತ್ ಅದಾಲತ್ ನಡೆಸಲು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಎಲ್ಲಾ ಎಸ್ಕಾಂಗಳಿಗೆ ಸೂಚಿಸಿದ್ದರು. ಇದನ್ನೂ ಓದಿ: ಸಿನಿಮಾವಾಗಲಿದೆ ಕಾಫಿ ಡೇ ಸಂಸ್ಥಾಪಕ, ಕಾಫಿ ಕಿಂಗ್ ಸಿದ್ಧಾರ್ಥ್ ಅವರ ಬಯೋಪಿಕ್

ವಿದ್ಯುತ್ ಸಂಬಂಧಿತ ಕುಂದು-ಕೊರತೆಗಳನ್ನು ಆಲಿಸಿ ಅದಕ್ಕೆ ಸ್ಥಳದಲ್ಲೇ ಪರಿಹಾರ ಸೂಚಿಸುವುದು ಅಥವ ನಿಗದಿತ ಕಾಲಮಿತಿಯೊಳಗೆ ನಿವಾರಿಸುವ ಉದ್ದೇಶದಿಂದ ಎಲ್ಲಾ ಎಸ್ಕಾಂಗಳಲ್ಲಿ ಅದಾಲತ್ ಏಕಕಾಲದಲ್ಲಿ ನಡೆಯಲಿದೆ. ಬೆಸ್ಕಾಂ ವ್ಯಾಪ್ತಿಯ 104 ಹಳ್ಳಿಗಳಲ್ಲಿ ಶನಿವಾರ ಅದಾಲತ್ ನಡೆಯಲಿದ್ದು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಬೆಸ್ಕಾಂನ ಮುಖ್ಯ ಪ್ರಧಾನ ವ್ಯವಸ್ಥಾಪಕ(ಆಪರೇಷನ್ಸ್) ಎಂ.ಎಲ್ ನಾಗರಾಜು ತಿಳಿಸಿದ್ದಾರೆ.

ಗ್ರಾಹಕರು ದಿನನಿತ್ಯ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳಾದ ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯ, ಬಿಲ್ಲಿಂಗ್ ಇನ್ನಿತರ ಸಮಸ್ಯೆಗಳನ್ನು ಅದಾಲತ್‌ನಲ್ಲಿ ಆಲಿಸಿ, ಪರಿಹಾರ ಸೂಚಿಸಲಾಗುವುದು ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ಹಳ್ಳಿಗಳ ವ್ಯಾಪ್ತಿಯ ಉಪ-ವಿಭಾಗಗಳಲ್ಲಿ ನಡೆಯುವ ವಿದ್ಯುತ್ ಅದಾಲತ್‌ಗೆ ಹಾಜರಾಗುವ ಹಿರಿಯ ಅಧಿಕಾರಿಗಳು, ಆ ಹಳ್ಳಿಗೆ ಒದಗಿಸಿರುವ ವಿದ್ಯುತ್ ಪೂರೈಕೆ ಮೂಲಸೌಕರ್ಯಗಳು ಮತ್ತು ಆ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಪೂರ್ಣ ಮಾಹಿತಿ ಹೊಂದಿರಬೇಕು ಎಂದು ಬೆಸ್ಕಾಂ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಸ್ವಂತ ಖರ್ಚಿನಲ್ಲಿ ಸಾರ್ವಜನಿಕರಿಗಾಗಿ ಮೊಬೈಲ್ ಟಾಯ್ಲೆಟ್ ಸ್ಥಾಪಿಸಿದ ಪಿಎಸ್‍ಐ

ವಿದ್ಯುತ್ ಅದಾಲತ್ ಸಭೆಯಲ್ಲಿ ವಿದ್ಯುತ್ ಸುರಕ್ಷತೆ, ವಿದ್ಯುತ್ ಕಳ್ಳತನ ತಡೆ, ಜನಸ್ನೇಹಿ ವಿದ್ಯುತ್ ಸೇವೆಗಳು, ಸೌರ ವಿದ್ಯುತ್, ವಾಟ್ಸಪ್ ಸಹಾಯವಾಣಿ ಮತ್ತು ಸರ್ಕಾರದ ಇನ್ನಿತರ ಯೋಜನೆಗಳ ಕುರಿತು ಗ್ರಾಹಕರಿಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಆನ್‌ಲೈನ್ ಜನಸ್ನೇಹಿ ವಿದ್ಯುತ್ ಸೇವೆಗಳ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಗ್ರಾಹಕರಿಗೆ ಅರಿವು ಮೂಡಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.

ಈ ಅಭಿಯಾನವನ್ನು ಆದ್ಯತೆಯ ಮೇರೆಗೆ ತಾಲೂಕಿನ ಗಡಿ ಭಾಗದ ಹಳ್ಳಿಗಳಿಂದ ಆರಂಭಿಸಿ ಪ್ರತಿ ಹಳ್ಳಿಗಳಿಗೆ ವಿಸ್ತರಿಸಲಾಗುವುದು. ಪ್ರತಿ ತಿಂಗಳ ಅಭಿಯಾನದ ಮಾಹಿತಿಗಳನ್ನು ನಿಗದಿತ ನಮೂನೆಯಲ್ಲಿ ನಮೂದಿಸಿ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *