ಉನ್ನತ ಹುದ್ದೆಯಲ್ಲಿದ್ದು, ಜ್ಞಾನವಂತನಾಗಿ ತಪ್ಪು ಮಾಡಿದೆ- ಕ್ಷಮೆಯಾಚಿಸಿದ ವಿಧಾನಸಭೆ ಕಾರ್ಯದರ್ಶಿ

Public TV
2 Min Read

ಬೆಂಗಳೂರು: ವಿಧಾಸಭೆಯ ಮೊಗಸಾಲೆಯಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿರೋ ಘಟನೆಗೆ ಸಂಬಂಧಿಸಿದಂತೆ ಕಾರ್ಯದರ್ಶಿ ಎಸ್ ಮೂರ್ತಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅಧಿವೇಶನ ಇಲ್ಲದ ಸಂದರ್ಭದಲ್ಲಿ ಮೊಗಸಾಲೆಯನ್ನು ನೌಕರರು ಬಳಸಿಕೊಳ್ಳುತ್ತಾರೆ. ತಿಳುವಳಿಕೆ ಇಲ್ಲದೇ ಅವರು ಅಲ್ಲಿ ಕೇಕ್ ತಂದು ಇಟ್ಟಿದ್ದರು. ಅಲ್ಲದೇ ಅದಾಗಲೇ ಸುಮಾರು 200 ಮಂದಿ ನೌಕರರು ಸೇರಿದ್ದು, ಭಾವನಾತ್ಮಕವಾಗಿ ನಾನು ಆಚರಿಸಿಕೊಂಡು ತಪ್ಪು ಮಾಡಿದೆ ಅಂತ ಹೇಳಿದ್ರು.

30 ವರ್ಷದಿಂದ ಇಲ್ಲೇ ದುಡಿತಾ ಇದ್ದೀನಿ. ಅವರು ಕೂಡ ನನ್ನ ಜೊತೆ ಬಹಳಷ್ಟು ಕಾಲ ದುಡಿದಿದ್ದಾರೆ. ನನ್ನ ಕರ್ಮ ಭೂಮಿಯಾಗಿರೋ ವಿಧಾನಸಭೆಗೆ ನಾನು ನನ್ನ ತಾಯಿಯ ಸ್ಥಾನ ನೀಡಿದ್ದೇನೆ. ಭಾವನಾತ್ಮಕವಾಗಿ ನಾನು ಅಲ್ಲಿಗೆ ಹೋದೆ ಅಂತ ಅವರು ಹೇಳಿದ್ರು.

ವಿಧಾನಸಭೆಯ ಮೊಗಸಾಲೆಯಲ್ಲಿ ಬರ್ತ್ ಡೇ ಆಚರಣೆ ಬೇಡ ಅಂತ ಹೇಳದ್ದು ನನ್ನಿಂದ ತಪ್ಪಾಗಿದೆ. ಇಷ್ಟು ದೊಡ್ಡ ಹುದ್ದೆಯಲ್ಲಿ ಇದ್ದುಕೊಂಡು ಪವಿತ್ರ ಸ್ಥಳದ ಬಗ್ಗೆ ಜ್ಞಾನ, ಮಾಹಿತಿ ಹೊಂದಿದ್ದು, ತಿಳಿದು ತಪ್ಪು ಮಾಡಿದೆ. ಆದ್ರೆ ನೌಕರರು ಅಲ್ಲಿ ನೆರೆದಿದ್ದನ್ನು ಕಂಡು ಭಾವನಾತ್ಮಕವಾಗಿ ನಾನು ಅದೇ ಜಾಗದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡೆ. 10 ನಿಮಿಷ ಅವರ ಜೊತೆ ಇದ್ದು ನಾನು ಈ ಕಡೆ ಬಂದಿದ್ದೇನೆ. ಏನೇ ಆಗಲಿ ನಾನು ಆ ಸ್ಥಳದಲ್ಲಿ ಇಂತಹ ತಪ್ಪು ಮಾಡಬಾರದು ಅಂತ ತನ್ನ ತಪ್ಪನ್ನು ಒಪ್ಪಿಕೊಂಡರು.

ಇದೇ ವೇಳೆ ತಾರಾ ಅವರು ಕೂಡ ಪಬ್ಲಿಕ್ ಟಿವಿ ಜೊತೆ ರಾಜ್ಯದ ಜನತೆಯ ಕ್ಷಮೆ ಕೇಳಿದ್ದಾರೆ. ಯಾವುದೋ ಒಂದು ಕೆಲಸದ ನಿಮಿತ್ತ ನಾನು ವಿಧಾನಸಭೆಗೆ ತೆರಳಿದ್ದೆ. ಈ ವೇಳೆ ಮೂರ್ತಿಯವರ ಹುಟ್ಟು ಹಬ್ಬ ಅಂತ ಹೇಳಿದ್ರು. ಹೀಗಾಗಿ ನಾನು ಅವರಿಗೆ ವಿಶ್ ಮಾತಾನಾಡುತ್ತಿದ್ದೆ. ಇದೇ ಸಂದರ್ಭದಲ್ಲಿ ನೌಕರರೆಲ್ಲರೂ ಅಲ್ಲಿಗೆ ಬಂದು ಮೂರ್ತಿಯವರನ್ನು ಕರೆದ್ರು. ಅಲ್ಲದೇ ನನ್ನನ್ನೂ ಕೂಡ ಬರುವಂತೆ ಪ್ರೀತಿಯಿಂದ ಕೇಳಿಕೊಂಡರು. ನಾನೇನು ಕೇಕ್ ತಗೆದುಕೊಂಡು ಹೋಗಿರಲಿಲ್ಲ. ಅಲ್ಲದೇ ನನಗೂ ಅದಕ್ಕೂ ಸಂಬಂಧವಿಲ್ಲ. ಬನ್ನಿ ಅಂತ ಕರೆದಾಗ ಹೋದೆ ಅಷ್ಟೆ ಅಂತ ಅವರು ಹೇಳಿದ್ರು.

ಏನಿದು ಘಟನೆ?:
ಜುಲೈ 17ರಂದು ವಿಧಾನಸಭೆಯ ಮೊಗಸಾಲೆಯಲ್ಲಿಯೇ ಕಾರ್ಯದರ್ಶಿ ಮೂರ್ತಿಯವರು ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ಪಾರ್ಟಿಯಲ್ಲಿ ಚಿತ್ರ ನಟಿ ಕಮ್ ಮೇಲ್ಮನೆ ಸದಸ್ಯೆ ತಾರಾ ಸೇರಿ ಹಲವರು ಭಾಗಿಯಾಗಿದ್ದರು. ಪಾರ್ಟಿಯಲ್ಲಿದ್ದ ಅರ್ಧದಷ್ಟು ಮಂದಿ ವಿಧಾನಸೌಧ ಸಿಬ್ಬಂದಿಯೇ ಅಲ್ಲ. ಪಾಸ್ ಇಲ್ಲದೇ ಇವರೆಲ್ಲ ನಿಬರ್ಂಧಿತ ಸ್ಥಳಕ್ಕೆ ಹೇಗೆ ಪ್ರವೇಶ ಪಡೆದ್ರು? ವಿಧಾನಸಭೆ ಸಭಾಂಗಣದ ಮೊಗಸಾಲೆಯಲ್ಲಿ ಬರ್ತ್ ಡೇ ಪಾರ್ಟಿ ಮಾಡಬಹುದಾ? ನಿರ್ಬಂಧಿತ ಸ್ಥಳದಲ್ಲಿ ಬರ್ತ್ ಡೇ ಪಾರ್ಟಿಗೆ ಅನುಮತಿ ಕೊಟ್ಟಿದ್ದು ಯಾರು? ಎಲ್ಲರಿಗೂ ಇದೇ ರೀತಿ ಪಾರ್ಟಿಗೆ ಅವಕಾಶ ಕೊಡುತ್ತೀರಾ? ಅನ್ನೋ ಹಲವಾರು ಪ್ರಶ್ನೆಗಳು ಇದೀಗ ಜನಸಾಮಾನ್ಯರಲ್ಲಿ ಮೂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *