ನನಗೆ ವಯಸ್ಸಾಯ್ತು ಅಂತ ಕಾಲೆಳೆಯುತ್ತಾರೆ ಅದಕ್ಕೆ ವಾರಕ್ಕೊಮ್ಮೆ ಶೇವ್ ಮಾಡಿಸ್ತೀನಿ: ಸಿದ್ದರಾಮಯ್ಯ

By
2 Min Read

ಬೆಂಗಳೂರು: ನನಗೆ ವಯಸ್ಸು ಆಯ್ತು ಅಂತ ಕಾಲೆಳೆಯುತ್ತಾರೆ ಅದಕ್ಕೆ ನಾನು ವಾರಕ್ಕೊಮ್ಮೆ ಶೇವ್ ಮಾಡಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು. ಈ ವೇಳೆ ನಿಯಮ 69ರಡಿ ಚರ್ಚೆಯ ಭಾಷಣವನ್ನು ಊಟಕ್ಕೆ ಮೊದಲು ಚರ್ಚೆ ಮುಗಿಸಿ ಎಂದು ಸ್ಪೀಕರ್ ಹೇಳಿದಾಗ ಊಟದ ನಂತರವೂ ಮಾತನಾಡುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದರು.

ಆಗ ಮಧ್ಯಪ್ರವೇಶ ಮಾಡಿದ ಈಶ್ವರಪ್ಪ ಅವರು ಇವತ್ತು ಸಿದ್ದರಾಮಯ್ಯ ಕ್ಲೀನ್ ಶೇವ್ ನೋಡಿ, ಏನ್ ಸ್ಮಾರ್ಟ್ ಆಗಿ ಬಂದಿದ್ದೀರಾ ಎಂದು ಕಿಚಾಯಿಸಿದರು. ಆಗ ಹಾಸ್ಯದಲ್ಲೇ ಉತ್ತರ ಕೊಟ್ಟ ಸಿದ್ದರಾಮಯ್ಯ ವಾರಕ್ಕೊಮ್ಮೆ ಹೀಗೆ ಶೇವ್ ಮಾಡಿಸ್ತೀನಿ. ಇಲ್ಲದಿದ್ದರೆ ನಿನ್ನಂತವರು ವಯಸ್ಸಾಯ್ತು ಅಂತಾ ಕಾಲೆಳೆಯುತ್ತಾರಲ್ಲ ಎಂದರು. ಇದನ್ನೂ ಓದಿ: ಬಾಲಿವುಡ್ ಗಲ್ಲಿ ಬಾಯ್ ಖ್ಯಾತಿಯ ರಾಪರ್ ಧರ್ಮೇಶ್ ಪರ್ಮಾರ್ ಇನ್ನಿಲ್ಲ

ಆಗ ಮತ್ತೆ ಛೇಡಿಸಿದ ಈಶ್ವರಪ್ಪ ನಿಮಗೆ ವಯಸ್ಸಾಯ್ತು ಅಂತ ಯಾರು ಹೇಳುತ್ತಾರೆ ಅಂತ ಅಂದರು. ನನಗೆ ಎಷ್ಟು ವಯಸ್ಸು ಅಂತ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ನಮ್ಮ ಮನೆಯವರಿಗೂ ನನಗೆ ಎಷ್ಟು ವಯಸ್ಸು ಅಂತ ಗೊತ್ತಿಲ್ಲ ಎಂದರು.

ನನ್ನ ಹುಟ್ಟಿದ ದಿನವನ್ನು ನಮ್ಮ ಸ್ಕೂಲ್ ಮೇಷ್ಟ್ರು ರಾಜಪ್ಪ ಅಂತ ಅವರೇ 3-8-1947 ಅಂತ ಬರೆದುಕೊಂಡಿದ್ದಾರೆ. ಅದಕ್ಕೆ ನಾನು ನನ್ನ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳಲ್ಲ. ನಮ್ಮ ಅಪ್ಪ, ಅಮ್ಮ ಹೆಬ್ಬೆಟ್ಟು ಅವರಿಗೂ ಗೊತ್ತಿಲ್ಲ. ಮೇಷ್ಟ್ರು ಹೇಳಿದ ದಿನಾಂಕದ ಪ್ರಕಾರ ನನಗೆ 75 ವರ್ಷ. ಈಶ್ವರಪ್ಪ ನೀನು 60 ಅಂತ ಬೇಕಾದರೆ ಹೇಳು ಪರವಾಗಿಲ್ಲ ಅಂತಾ ಹಾಸ್ಯ ಮಾಡಿದರು.

ಮಾತು ಮುಂದುವರಿಸಿದ ಸಿದ್ದರಾಮಯ್ಯ, ನನ್ನ ಸ್ಕೂಲ್ ಮೇಷ್ಟ್ರು ವೀರಭದ್ರ ಕುಣಿತ ಕಲಿಸುತ್ತಿದ್ದವರು ಕೊನೆಗೆ ನನಗೆ ಕಾಗುಣಿತ ಕಲಿಸಿದರು. ಎರಡೇ ವರ್ಷದಲ್ಲಿ ಕನ್ನಡ ಕಲಿತೆ. ಹಾಗಾಗಿ ಈಗಲೂ ಕನ್ನಡ ಚೆನ್ನಾಗಿ ಬರುತ್ತೆ. ಮೇಷ್ಟ್ರು ಏನು ಹೇಳಿಕೊಡ್ತಾರೆ, ಅದನ್ನ ವೈಯುಕ್ತಿಕ ಆಸಕ್ತಿ ಮೇಲೆ ಕಲಿಯಬೇಕು. ವ್ಯಾಕರಣ, ಸಂಧಿ ಎಲ್ಲವೂ ಕಲಿತೆ. ನನಗೆ ಎಲ್ಲಾ ಹೇಳಿಕೊಟ್ಟಿದ್ದು ಈಶ್ವರಾಚಾರಿ ಮೇಷ್ಟ್ರು ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕದ ಗಣಿಗಾರಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ರಚನೆ – ಸುಪ್ರೀಂಕೋರ್ಟ್

ನಮ್ಮ ಮೇಷ್ಟ್ರು ಹೆಸರು ಈಶ್ವರಾಚಾರಿ ಅಂತ ನೀನಲ್ಲಪ್ಪ ಈಶ್ವರಪ್ಪ ಅಂತ ಈಶ್ವರಪ್ಪ ಕಡೆ ನೋಡಿಕೊಂಡು ಅವರು ಕಾಲೆಳೆದರು. ಇದೇ ವೇಳೆ ಮಧ್ಯಪ್ರವೇಶ ಮಾಡಿದ ನಿಮಗೆ ಕನ್ನಡ ವ್ಯಾಕರಣ ಚೆನ್ನಾಗಿ ಗೊತ್ತು ಬಿಡಿ, ಬಹಳ ಸಲ ಅದು ಸಾಬೀತಾಗಿದೆ. ಸಂಧಿ, ಸಮಾಸ ಚೆನ್ನಾಗಿಯೇ ಗೊತ್ತು ಎಂದರು.

Share This Article
Leave a Comment

Leave a Reply

Your email address will not be published. Required fields are marked *