‘ರಾಜ್ಯ, ರಾಷ್ಟ್ರೀಯ ಹೆದ್ದಾರಿಯ ಟೋಲ್‍ಗಳಲ್ಲಿ ವಿಐಪಿಗಳಿಗೆ ಪ್ರತ್ಯೇಕ ದ್ವಾರ ನಿರ್ಮಿಸಿ’

Public TV
1 Min Read

– ಪರಿಷತ್‍ನಲ್ಲಿ ಸರ್ಕಾರದ ವಿರುದ್ಧ ಜೆಡಿಎಸ್, ಬಿಜೆಪಿ ಶಾಸಕರ ಪ್ರತಿಭಟನೆ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಯ ಟೋಲ್‍ಗಳಲ್ಲಿ ಅಂಬುಲೆನ್ಸ್ ಮತ್ತು ವಿಐಪಿ ವಾಹನಗಳಿಗೆ ಪ್ರತ್ಯೇಕ ದ್ವಾರ ನಿರ್ಮಿಸಬೇಕು ಎಂದು ವಿಧಾನ ಪರಿಷತ್‍ನಲ್ಲಿ ಜೆಡಿಎಸ್ ಸದಸ್ಯರು ಆಗ್ರಹಿಸಿದರು.

ಈ ವೇಳೆ ಫೆಬ್ರವರಿ 13ರಂದು ಸಂಜೆ 5 ಗಂಟೆಗೆ ಈ ಬಗ್ಗೆ ಸಭೆ ಕರೆದು ಚರ್ಚಿಸೋಣ ಎಂದ ಲೋಕೋಪಯೋಗಿ ಸಚಿವ ಮಹದೇವಪ್ಪ ಉತ್ತರಕ್ಕೆ ಜೆಡಿಎಸ್- ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ರು. ಲೋಕೋಪಯೋಗಿ ಸಚಿವರು ಪ್ರತಿ ಬಾರಿ ಹೀಗೆ ಹೇಳುತ್ತಾರೆ, ಕೆಲವು ಟೋಲ್ ಅಲ್ಲ. ಎಲ್ಲ ಟೋಲ್ ಗಳಲ್ಲೂ ಈ ರೀತಿಯ ಸಮಸ್ಯೆಗಳಿವೆ ಅಂತಾ ಜೆಡಿಎಸ್ ಸದಸ್ಯ ಶರವಣ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸದನದ ಬಾವಿಗಿಳಿದು ಜೆಡಿಎಸ್, ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ರು.

ಮಾಜಿ ಪ್ರಧಾನಿ ದೇವೇಗೌಡರಿಗೂ ಬಿಟ್ಟಿಲ್ಲ ಅಂದ್ರೆ ನಾಚಿಕೆ ಆಗಬೇಕು. ಸಚಿವರಾಗಿ ನೀವು ವಿಫಲರಾಗಿದ್ದೀರಾ ಎಂದ ಈಶ್ವರಪ್ಪ, ಎಲ್ಲರಿಗೂ ಟೋಲ್ ತೆಗೆದು ಬಿಡಿ ಅಂದ್ರು. ಇದಕ್ಕೆ ತಿರುಗೇಟು ನೀಡಿದ ಮಹದೇವಪ್ಪ ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಯಲ್ಲಿದೆ. ಕೇಂದ್ರ ಸರ್ಕಾರವನ್ನ ಒತ್ತಾಯಿಸಿ ಅಂದ್ರು. ಮತ್ಯಾಕೆ ಸಭೆ ಮಾಡ್ತೀರಾ ಅಂತ ಈಶ್ವರಪ್ಪ ಟಾಂಗ್ ಕೊಟ್ಟರು. ಈ ವೇಳೆ ಈಶ್ವರಪ್ಪ ಮಹದೇವಪ್ಪ ನಡುವೆ ವಾಕ್ಸಮರ ನಡೀತು.

ಮಧ್ಯಪ್ರವೇಶಿಸಿದ ಸಚಿವ ಡಿಕೆಶಿವಕುಮಾರ್ ನಮ್ಮ ಹೆಸ್ರಲ್ಲಿ ಪಾಸ್‍ಗಳು ದುರುಪಯೋಗ ಆಗ್ತಿದೆ. ನನ್ನ ಶಿಷ್ಯರು ಕಲರ್ ಜೆರಾಕ್ಸ್ ಮಾಡಿ, ಬಾರು, ವೈನ್ ಶಾಪ್ ಮುಂದೆ ವಾಹನ ನಿಲ್ಲಿಸುತ್ತಿದ್ದಾರೆ. ಈ ದುರುಪಯೋಗ ತಡೆಯಲು ಮ್ಯಾಗ್ನೆಟಿಕ್ ಐಡಿ ಕಾರ್ಡ್ ತರಲು ಚಿಂತಿಸಲಾಗಿದೆ. ಫೆಬ್ರವರಿ 13ರ ಸಭೆಯಲ್ಲಿ ಎಲ್ಲವನ್ನ ಚರ್ಚಿಸೋಣ ಅಂತ ವಾಕ್ಸಮರಕ್ಕೆ ತೆರೆ ಎಳೆದ್ರು.

ಸಭಾಪತಿ ಪೀಠದ ಮುಂದೆ ಬಿಜೆಪಿ ಜೆಡಿಎಸ್ ಪ್ರತಿಭಟಿಸಿ ಟೋಲ್ ಗೇಟ್‍ನಲ್ಲಿ ಶಾಸಕರೊಂದಿಗೆ ಟೋಲ್ ಸಿಬ್ಬಂದಿ ಅನುಚಿತ ವರ್ತನೆ ತೋರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *