ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಸ್- ಕೊಡಗಿನಲ್ಲಿ ಬಿಜೆಪಿ, ಕಾಂಗ್ರೆಸ್ ಫೈಟ್

Public TV
2 Min Read

ಮಡಿಕೇರಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕೊಡಗಿನ ಚುನಾವಣಾ ಕಣ ರಂಗೇರುತ್ತಿರುವಾಗಲೇ ಜೆಡಿಎಸ್ ಅಭ್ಯರ್ಥಿ ಇಸಾಕ್ ಖಾನ್ ನಾಮಪತ್ರ ವಾಪಸ್ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.

ಹೌದು, ಇಂದು ಬೆಳಗ್ಗೆವರೆಗೆ ಚುನಾವಣೆ ಎದುರಿಸುತ್ತೇವೆ ಎಂದು ದೃಢವಾದ ನಿರ್ಧಾರದಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಇಸಾಕ್ ಖಾನ್, ನಾಮಪತ್ರ ವಾಪಸ್ ಪಡೆಯುವಂತೆ ನನ್ನ ಮೇಲೆ ಕಾಂಗ್ರೆಸ್ ಮುಖಂಡರು ಒತ್ತಡ ಹಾಕುತ್ತಿದ್ದಾರೆ. ಜೆಡಿಎಸ್ ಅಲ್ಪಸಂಖ್ಯಾತರನ್ನು ಗುರುತಿಸಿ ಟಿಕೆಟ್ ನೀಡಿತ್ತು. ಆದರೆ ಅಲ್ಪಸಂಖ್ಯಾತರ ವೋಟುಗಳನ್ನು ಹಾಳು ಮಾಡುವುದಕ್ಕಾಗಿಯೇ ಜೆಡಿಎಸ್ ಅಭ್ಯರ್ಥಿ ಹಾಕಿದೆ ಎಂದು ಕಾಂಗ್ರೆಸ್ಸಿನವರು ಆರೋಪಿಸಿ ನಮಗೆ ಮಾನಸಿಕ ಒತ್ತಡ ಹಾಕುತ್ತಿದ್ದಾರೆ ಎಂದು ಇಸಾಕ್ ಖಾನ್ ಹೇಳಿದ್ದರು. ಇದನ್ನೂ ಓದಿ: ಯಡಿಯೂರಪ್ಪ ಫೋನ್ ಮಾಡಿ ಬೆಂಬಲ ಕೇಳಿದ್ದಾರೆ: ಎಚ್‍ಡಿಕೆ

ಮಧ್ಯಾಹ್ನದ ಹೊತ್ತಿಗೆ, ಜೆಡಿಎಸ್ ಹೈಕಮಾಂಡ್‍ನಿಂದ ಸೂಚನೆ ಬಂದಿದೆ. ಹೆಚ್.ಡಿ.ಕುಮಾರಸ್ವಾಮಿ ಅವರೇ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದರು. ಹೀಗಾಗಿ ಹೈಕಮಾಂಡ್ ಸೂಚನೆಯಂತೆ ನಾಮಪತ್ರ ವಾಪಸ್ ಪಡೆದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ ಕೊಡಗಿನ ಕುಶಾಲನಗರ ಭಾಗದಲ್ಲಿ ಮತಯಾಚನೆ ಮಾಡುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡರನ್ನು ಕೇಳಿದರೆ, ನಾವು ಯಾವುದೇ ಒತ್ತಡ ಹಾಕಿಲ್ಲ. ಅವರು ನಾಮಪತ್ರ ವಾಪಸ್ ಪಡೆಯುತ್ತಿರುವುದು ನಮಗೆ ಗೊತ್ತಿಲ್ಲ. ಜೆಡಿಎಸ್ ಹೈಕಮಾಂಡ್ ಮನಸ್ಸಿನಲ್ಲಿ ಯಾವ ನಿರ್ಧಾರ ಇತ್ತೋ ಗೊತ್ತಿಲ್ಲ. ಬಹುಶಃ ಕೋಮುವಾದಿಗಳಿಗೆ ಅನುಕೂಲ ಆಗಬಾರದೆಂದು ಅವರ ಅಭ್ಯರ್ಥಿಯ ನಾಮಪತ್ರ ವಾಪಸ್ ಪಡೆಸಿರಬಹುದು. ಅವರು ನಾಮಪತ್ರ ವಾಪಸ್ ಪಡೆದಿರುವುದರಿಂದ ನಾವು ಜೆಡಿಎಸ್ ಮುಖಂಡ ಬೆಂಬಲವನ್ನು ಕೋರುತ್ತೇನೆ. ಬೆಂಬಲ ಕೋರುವುದು ನನ್ನ ಜವಾಬ್ದಾರಿ ಬೆಂಬಲ ಕೊಡುವುದು ಬಿಡುವುದು ಜೆಡಿಎಸ್ ನಾಯಕರಿಗೆ ಬಿಟ್ಟಿದ್ದು. ಆದರೆ ಹಲವು ವರ್ಷಗಳಿಂದ ಕೊಡಗಿನಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಇದರಿಂದ ಸ್ವತಃ ಗ್ರಾಮ ಪಂಚಾಯಿತಿ ಸದಸ್ಯರೇ ಈ ಬಾರಿ ಬದಲಾವಣೆ ಆಗಲೇಬೇಕೆಂದು ನೇರವಾಗಿ ನಮ್ಮ ಬಳಿ ಹೇಳುತ್ತಿದ್ದಾರೆ. ಹೀಗಾಗಿ ನಾವು ಗೆಲ್ಲುವ ವಿಶ್ವಾಸದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡುತ್ತದೆ: ಧ್ರುವನಾರಾಯಣ್

ಒಟ್ಟಿನಲ್ಲಿ ಕೊಡಗಿನ 103 ಗ್ರಾಮ ಪಂಚಾಯಿತಿಗಳಲ್ಲಿ 1,334 ಮತಗಳಿವೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದ್ದು, ಬಿರುಸಿನ ಪ್ರಚಾರ ನಡೆಯುತ್ತಿದೆ. ಆದರೆ ಮತದಾರರು ಯಾರ ಕೈ ಹಿಡಿಯುತ್ತಾರೊ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *