ಗುಡ್ಡದ ಮೇಲಿನಿಂದ ಹಡಗಿನಂತೆ ಚಲಿಸಿದ ಮನೆ: ಅಜ್ಜಿ, ಮೊಮ್ಮಗು ಪಾರಾದ ಕಥೆ ಓದಿ

Public TV
2 Min Read

ಮಡಿಕೇರಿ: ಕೊಡಗಿನಲ್ಲಿ ಮನೆಯೊಂದು ಸುರಿವ ಮಳೆಯ ಪ್ರಕೋಪಕ್ಕೆ, ಸರ್ರನೆ ಬುಡ ಸಮೇತ ಜಾರಿ ಹೋಗುವ ವಿಡಿಯೋವೊಂದು ವೈರಲ್ ಆಗಿತ್ತು. ಈ ದೃಶ್ಯ ನಿಜಕ್ಕೂ ಎದೆಯೊಡೆಯೋ ಭಯಾನಕ ದೃಶ್ಯವಾಗಿತ್ತು. ಗುಡ್ಡದ ಮೇಲಿಂದ ಮನೆ ಬಿದ್ದರೂ ಮಹಿಳೆ ಹಾಗೂ ಆಕೆಯ ಕುಟುಂಬದವರು ಸುರಕ್ಷಿತವಾಗಿ ಪಾರಾಗಿದ್ದಾರೆ.

ಬೆಟ್ಟದ ಮೇಲಿಂದ ಮನೆ ನೋಡ ನೋಡುತ್ತಿದ್ದಂತೆ ಜಾರು ಬಂಡಿ ಆಗಿ ಕಣ್ಣೆದುರೇ ಪಾತಾಳಕ್ಕೆ ಕೊಚ್ಚಿ ಹೋಗಿತ್ತು. ಈ ಮನೆ ಮಡಿಕೇರಿಯ ತರಕಾರಿ ವ್ಯಾಪಾರಿ ಅನೀಫ್(54) ಅವರ ಮನೆಯಾಗಿದ್ದು, ಪೈಸೆ ಪೈಸೆ ಸೇರಿಸಿ ಅನಿಫ್ ಹಾಗೂ ಅವರ ಪತ್ನಿ ಅಮೀನಾ ತಮ್ಮದೊಂದು ಪುಟ್ಟ ಗೂಡನ್ನು ಮಡಿಕೇರಿಯ ಮುತ್ತಪ್ಪ ದೇಗುಲದ ಹಿಂಭಾಗದ ಕಟ್ಟಿಕೊಂಡಿದ್ದರು.

ಆಗಸ್ಟ್ 15ರ ಬೆಳಗ್ಗೆ 7.30ಕ್ಕೆ ಎಂದಿನಂತೆ ತಮ್ಮ ಮಗನೊಟ್ಟಿಗೆ ತರಕಾರಿ ಅಂಗಡಿ ಕೆಲಸಕ್ಕೆ ಹೊರಟ ಅನೀಫ್ ಪಾಲಿಗೆ ಬರಸಿಡಿಲಿನಂಥ ಸುದ್ದಿ ಕಾದಿತ್ತು. ಪಕ್ಕದ ಮನೆ ಬಹುತೇಕ ಕುಸಿಯುವಂತಾಗಿದ್ದನ್ನು ಗಮನಿಸಿದ್ದ ಅನೀಫ್, ಕೇವಲ 8 ವರ್ಷಗಳ ಹಿಂದಷ್ಟೇ ಕಟ್ಟಿದ್ದ ತನ್ನ ಮನೆ ಗಟ್ಟಿಮುಟ್ಟಾಗಿದೆ. ನೆಲ ಕಚ್ಚೋದು ಅಷ್ಟು ಸುಲಭವಲ್ಲ ಅಂತ ಮನಸ್ಸಿನಲ್ಲೇ ಅಂದುಕೊಂಡು ಹೋಗಿದ್ದರು. ಆದರೆ ಬೆಳಗ್ಗೆ 9ರ ವೇಳೆಗೆ ಬಂದ ಕರೆ ಅವರು ನಿಂತಿದ್ದ ನೆಲ ಅದುರುವಂತೆ ಮಾಡಿತ್ತು. ಇದನ್ನೂ ಓದಿ: 20 ದಿನದ ಹಸುಗೂಸಿಗಾಗಿ ಮಳೆಯಲ್ಲೇ ಓಡಿ, ಬದುಕಿಸಿಕೊಳ್ಳಲಾಗದೇ ನರಳಾಡುತ್ತಿರುವ ತಾಯಿ!

ತನ್ನ ಕನಸಿನ ಸೌಧ ಕುಸಿದ ಸುದ್ದಿಗೆ ತತ್ತರಿಸಿದ್ದ ಅನೀಫ್ ಮನೆಯಿದ್ದ ಸ್ಥಳಕ್ಕೆ ಧಾವಂತದಿಂದ ಬಂದು ನೋಡಿದಾಗ ಕಂಡಿದ್ದು ಆಘಾತಕಾರಿ ದೃಶ್ಯ. ತನ್ನ ಮನೆ ಮಳೆ ನೀರಲ್ಲಿ ಕೊಚ್ಚಿ ಹೋಗೋ ದೃಶ್ಯ ಮೊಬೈಲಿನಲ್ಲಿ ಸೆರೆ ಹಿಡಿದಿದ್ದ ಸ್ಥಳೀಯರು ಘಟನಾವಳಿಯನ್ನು ತೋರಿಸುತ್ತಿದ್ದರೆ, ನೋಡಲಾಗದೆ ಕಣ್ಮುಚ್ಚಿ ಕಂಬನಿ ಮಿಡಿದಿದ್ದ ಅನೀಫ್ ಪಾಲಿಗೆ ಎಲ್ಲವೂ ಮುಗಿದಂತಾಗಿತ್ತು. ಕುಸಿದು ಹೋಗುತ್ತಿದ್ದ ಮನೆಯೊಳಗಿದ್ದ ಅನೀಫ್ ಮಡದಿ ಅಮೀನಾ ಈ ಆಘಾತಕಾರಿ ಘಟನೆ ಕಂಡು ಪ್ರಜ್ಞೆತಪ್ಪಿ ಬಿದ್ದಿದ್ದರು. ಸ್ಥಳೀಯರ ಸಮಯಪ್ರಜ್ಞೆ ಅವರನ್ನು ಬದುಕುಳಿಸಿದೆ. ಇದನ್ನೂ ಓದಿ: ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!

ಈ ವರ್ಷ ಬಕ್ರೀದ್ ಹಬ್ಬವನ್ನು ತುಸು ಜೋರಾಗಿ ಆಚರಿಸುವ ಇರಾದೆ ಇಡೀ ಪರಿವಾರದಾಗಿತ್ತು. ಅದಕ್ಕಾಗಿ ಸಕಲ ಸಂಭ್ರಮದ ಸಿದ್ಧತೆಗಳೂ ಈ ಜಾರಿ ಹೋಗುತ್ತಿರೋ ಮನೆಯೊಳಗೆ ನಡೆದಿದ್ದವು. ಮಗಳು ಅಳಿಯ ಮಂಗಳೂರಿಗೆ ಹೋಗಿ ವಾಪಸ್ಸಾಗುತ್ತಿದ್ದರು. ಇತ್ತ ಮನೆಯಲ್ಲಿ ಅಮೀನಾ ತನ್ನ 6 ತಿಂಗಳ ಮೊಮ್ಮಗುವಿನ ಜೊತೆ ಇದ್ದರು. ಆದರೆ ಇದ್ದಕ್ಕಿದ್ದಂತೆ ಜನರ ಚೀರಾಟ ಕೇಳಿಸಿದೆ. ಈ ವೇಳೆ ಏನಾಯ್ತಪ್ಪಾ ಅಂತ ಅಮೀನ ಮೊಮ್ಮಗು ಸಮೇತ ಮನೆಯಿಂದ ಹೊರ ಬಂದಿದ್ದಾರೆ. ಇಬ್ಬರು ಮನೆಯಿಂದ ಹೊರ ಬಂದಿದ್ದೆ ತಡ ಕ್ಷಣಾರ್ಧದಲ್ಲೇ ಮನೆ ಜಾರಿದೆ. ಅದೃಷ್ಟವಶಾತ್ ಜೀವ ಉಳಿದಿದೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಯುವತಿಯರು ಇಂದು ನಿರಾಶ್ರಿತರ ಕೇಂದ್ರದಲ್ಲಿ!

ಸದ್ಯ ಮಡದಿಯೂ ಸೇರಿ ಆ 3 ಜೀವಗಳು ಹೇಗೋ ಬಚಾವಾದ್ವಲ್ಲ ಅನ್ನೋ ತೃಪ್ತಿಯೊಂದೇ ಸದ್ಯ ಅನೀಫ್ ಪಾಲಿಗೆ ನೆಮ್ಮದಿಯ ವಿಚಾರವಾಗಿದೆ. ಬದುಕಿಗೆ ನೆಲೆಯಾಗಿದ್ದ ಮನೆಯನ್ನು ಪ್ರಾಕೃತಿಕ ವಿಕೋಪ ಆಪೋಷನ ತೆಗೆದುಕೊಂಡರೂ ಅಮೂಲ್ಯ ಪ್ರಾಣ ಉಳಿಯಿತಲ್ಲ ಅನ್ನೋ ಕೃತಜ್ಞತೆ ಈ ಪರಿವಾರದ ಕಣ್ಣಂಚಲ್ಲಿ ಕಾಣಿಸದೆ ಇರದು. ಇದು ಒಬ್ಬ ಅನೀಫ್ ಕಥೆಯಲ್ಲ, ಕೊಡಗಿನಾದ್ಯಂತ ಇಂಥ ಆಘಾತಕ್ಕೀಡಾದ ಪರಿವಾರಗಳು ಲೆಕ್ಕವಿಲ್ಲದಷ್ಟು. ಇದನ್ನೂ ಓದಿ: ತಮ್ಮ ನೋವು ಮರೆಯಲು ಸಂತ್ರಸ್ತರಿಂದ ಕೊಡವ ವಾಲಗಕ್ಕೆ ಡ್ಯಾನ್ಸ್- ವಿಡಿಯೋ ನೋಡಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *