ಮಗನ ನಿಶ್ಚಿತಾರ್ಥದಲ್ಲಿ ನೀತಾ ಅಂಬಾನಿ ಡ್ಯಾನ್ಸ್- ವಿಡಿಯೋ ವೈರಲ್

Public TV
3 Min Read

ಮುಂಬೈ: ಮಗನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ನಿಶ್ಚಿತಾರ್ಥ ಗುರುವಾರ ಮುಂಬೈನಲ್ಲಿ ನಡೆದಿದೆ. ಮಗನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಹೆಜ್ಜೆ ಹಾಕಿದ್ದಾರೆ.

ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮಹ್ತಾ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಕಾರ್ಯಕ್ರಮದಲ್ಲಿ ನೀತಾ ಅಬು ಜಾನಿ ಸಂದೀಪ್ ಕೋಸ್ಲಾ ಅವರ ಮರೂನ್ ಬಣ್ಣದ ಸೀರೆಯನ್ನು ಗುಜರಾತಿ ಸ್ಟೈಲ್‍ನಲ್ಲಿ ಧರಿಸಿ ಮಿಂಚಿದ್ದರು.

ನೀತಾ ಅಂಬಾನಿ ಭರತನಾಟ್ಯ ನೃತ್ಯಗಾರ್ತಿ ಆಗಿದ್ದು, ‘ಕಾಯ್ ಪೋ ಚೇ’ ಸಿನಿಮಾದ ‘ಶುಭಾರಂಭ್’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ನೀತಾ ಅಂಬಾನಿ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಮತ್ತೊಂದು ವಿಡಿಯೋದಲ್ಲಿ ಆಕಾಶ್ ಅವರ ಅವಳಿ ಸಹೋದರಿ ಇಶಾ ಗುಜರಾತಿನ ಸಾಂಪ್ರದಾಯಿಕ ಹಾಡು ಹಾಡಿ ನವಜೋಡಿಗೆ ಆರತಿ ಮಾಡಿದ್ದಾರೆ. ಆರತಿ ಆದ ನಂತರ ಶ್ಲೋಕಾ ತನ್ನ ನಾದಿನಿ ಇಶಾ ಕಾಲು ಮುಟ್ಟಿ ಆರ್ಶಿವಾದ ಪಡೆದಿದ್ದಾರೆ. ನಂತರ ಒಬ್ಬರಿಗೊಬ್ಬರು ತಬ್ಬಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದೆ.

ಆಕಾಶ್ ಹಾಗೂ ಶ್ಲೋಕಾ ನಿಶ್ಚಿತಾರ್ಥ ಮುಕೇಶ್ ಅಂಬಾನಿ ಮನೆಯಾದ ಅಂಟಿಲ್ಲಾದ 27ನೇ ಮಹಡಿಯಲ್ಲಿ ನಡೆದಿದೆ. ಬಾಲಿವುಡ್ ತಾರೆಯರು, ಕ್ರಿಕೆಟರ್ ಹಾಗೂ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಅವರ ಪತ್ನಿ ಅಂಜಲಿ ಭಾಗಿಯಾಗಿದ್ದರು. ಇನ್ನೂ ಬಾಲಿವುಡ್ ತಾರೆಗಳಾದ ಶಾರೂಖ್ ಖಾನ್, ಪ್ರಿಯಂಕಾ ಚೋಪ್ರಾ, ನಿಕ್ ಜೋನಸ್, ಕರಣ್ ಜೋಹರ್, ಅಲಿಯಾ ಭಟ್ ಹಾಗೂ ರಣ್‍ಬೀರ್ ಕಪೂರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಮುಕೇಶ್ ಹಾಗೂ ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ನಿಶ್ಚಿತಾರ್ಥ ಕೂಡ ಉದ್ಯಮಿ ಅಜಯ್ ಪಿರಾಮಲ್ ಅವರ ಪುತ್ರ ಆನಂದ್ ಜೊತೆ ಮೇ ತಿಂಗಳಲ್ಲಿ ನಡೆದಿತ್ತು. ಸದ್ಯ ಈಗ ಆಕಾಶ್- ಶ್ಲೋಕಾ, ಇಶಾ ಹಾಗೂ ಆನಂದ್ ಮದುವೆ ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಯಾರು ಶ್ಲೋಕಾ ಮೆಹ್ತಾ?
ಶ್ಲೋಕಾ ಮೆಹ್ತಾ ಈಗಾಗಲೇ ಉದ್ಯಮಿಯಾಗಿದ್ದು, ರೊಸಿ ಬ್ಲೂ ಡೈಮಾಂಡ್ ಹೆಸರಿನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ರೊಸಿ ಬ್ಲೂ ಡೈಮಾಂಡ್ ಸಂಸ್ಥೆ ಪ್ರಪಂಚದ ಪ್ರಮುಖ ವಜ್ರದ ಕಂಪೆನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಆಕಾಶ್ ಹಾಗೂ ಶ್ಲೋಕಾ ಇಬ್ಬರು ಬಾಲ್ಯದ ಗೆಳೆಯರಾಗಿದ್ದು, ಮುಂಬೈನ ಧೀರೂಬಾಯಿ ಅಂಬಾನಿ ಅಂತರಾಷ್ಟ್ರೀಯ ಶಾಲೆಯಲ್ಲಿ ಓದಿದ್ದರು. ಶ್ಲೋಕಾ ಮೆಹ್ತಾ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ ನಲ್ಲಿ ಪದವಿ ಪಡೆದಿದ್ದು, ಕುಟುಂಬದ ಉದ್ಯಮಗಳನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಆಕಾಶ್ ರಿಲಯನ್ಸ್ ಉದ್ಯಮ ಸಂಸ್ಥೆಗಳ ಬೋರ್ಡ್ ಆಫ್ ಡೈರೆಕ್ಟರ್ ಆಗಿ ನೇಮಕವಾಗಿದ್ದಾರೆ.

ಈ ಹಿಂದೆ ರಾಷ್ಟ್ರೀಯ ಸುದ್ದಿ ಮಾಧ್ಯಮಮೊಂದು ಆಯೋಜಿಸಿದ್ದ ಸಂವಾದ ಕಾಯಕ್ರಮದಲ್ಲಿ ಭಾಗವಹಿಸಿದ್ದ ನೀತಾ ಅಂಬಾನಿ, ತಮ್ಮ ಮಕ್ಕಳ ಜೀವನ ಸಂಗಾತಿಗಳ ಆಯ್ಕೆಯಲ್ಲಿ ಸ್ವಾತಂತ್ರ್ಯ ನೀಡಿರುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಮಗ 118 ಕೆಜಿ ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನೀತಾ ಅಂಬಾನಿ

Share This Article
Leave a Comment

Leave a Reply

Your email address will not be published. Required fields are marked *