ವೀಡಿಯೋ: ಯಾರಿಗೆ ಹೇಳಿದ್ರೂ ನೋ ಯೂಸ್‌, ಸ್ವತಃ ಚರಂಡಿಗಿಳಿದು ಕ್ಲೀನ್‌ ಮಾಡಿದ ಬಿಜೆಪಿ ಕೌನ್ಸಿಲರ್!

Public TV
2 Min Read

ಭೋಪಾಲ್: ‌ಮಧ್ಯಪ್ರದೇಶದ ಗ್ವಾಲಿಯರ್ (Gwalior) ಜಿಲ್ಲೆಯ ಬಿಜೆಪಿ ಕೌನ್ಸಿಲರ್ (BJP Councillor Devendra Rathore) ಒಬ್ಬರು ತಮ್ಮ ಪ್ರದೇಶದಲ್ಲಿ ಬಂದ್‌ ಆಗಿ ಗಬ್ಬು ನಾರುತ್ತಿದ್ದ ಚರಂಡಿಯನ್ನು ಸ್ವತಃ ತಾವೇ ಕ್ಲೀನ್‌ ಮಾಡಿದ ಪ್ರಸಂಗವೊಂದು ನಡೆದಿದೆ.

ನಗರದ ಬಿರ್ಲಾನಗರದಲ್ಲಿರುವ ಚರಂಡಿಯನ್ನು ವಾರ್ಡ್ 15ರ ಪಾಲಿಕೆ ಸದಸ್ಯ ದೇವೇಂದ್ರ ರಾಠೋಡ್ ಸ್ವಚ್ಛಗೊಳಿಸಿದವರು. ಇವರು ಈ ಸಂಬಂಧ ಹಲವಾರು ಬಾರಿ ದೂರು ನೀಡಿದರೂ ಮುನ್ಸಿಪಲ್ ಕಾರ್ಪೊರೇಷನ್ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಸ್ವತಂ ರಾಠೋಡ್‌ ಅವರೇ ಗುಂಡಿಗೆ ಇಳಿದು ಕ್ಲೀನ್‌ ಮಾಡಲು ಪ್ರಯತ್ನಿಸಿದ್ದಾರೆ. ಘಟನೆಯ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಂತರ ನಗರ ಪಾಲಿಕೆ ತಂಡ ಸ್ಥಳಕ್ಕೆ ಆಗಮಿಸಿ ಸ್ವಚ್ಛಗೊಳಿಸಿದರು.

ಘಟನೆ ವಿವರ: ವಾರ್ಡ್ ಸಂಖ್ಯೆ 15ರಲ್ಲಿ ದೊಡ್ಡ ಚರಂಡಿಯೊಂದಿದೆ. ಈ ಚರಂಡಿ ಬಂದ್‌ ಆಗಿ ನೀರು ಹೋಗಲು ಸಾಧ್ಯವಾಗದೇ ಸ್ಥಳೀಯ ನಿವಾಸಿಗಳ ಮನೆಗಳಿಗೆ ಗಲೀಜು ನೀರು ನುಗ್ಗಿತ್ತು. ಈ ಬಗ್ಗೆ ಪಾಲಿಕೆಯ ಗಮನಕ್ಕೆ ತಂದರೂ ಯಾರೂ ಗಮನ ಹರಿಸಿಲ್ಲ. ಈ ಬಗ್ಗೆ ಆಯುಕ್ತರಿಗೆ, ಮೇಯರ್‌ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಕೌನ್ಸಿಲ್‌ನಲ್ಲಿ ವಿಷಯ ಪ್ರಸ್ತಾಪಿಸಿದರೂ ಸಮಸ್ಯೆ ಮಾತ್ರ ಪರಿಹರಿಸಲು ಯಾರೂ ಮುಂದಾಗಲಿಲ್ಲ. ಹೀಗಾಗಿ ನಾನೇ ಪರಿಹರಿಸಬೇಕು ಎಂದು ಅರಿತುಕೊಂಡೆ ಎಂದು ದೇವೇಂದ್ರ ರಾಥೋಡ್ ತಿಳಿಸಿದರು.

ಜನರು ನನಗೆ ಮತ ನೀಡಿದ್ದಾರೆ, ಅವರ ಮತಕ್ಕೆ ಬೆಲೆ ನೀಡಬೇಕು. ಆದ್ದರಿಂದ ನಾನೇ ಚರಂಡಿಯನ್ನು ಸ್ವಚ್ಛಗೊಳಿಸಿದ್ದೇನೆ. ನಾನು ಸ್ವಚ್ಛಗೊಳಿಸಿದ ನಂತರ ನಗರಸಭೆ ನೌಕರರು ಸಹ ಬಂದು ಸ್ವಚ್ಛಗೊಳಿಸಲು ಪ್ರಾರಂಭಿಸಿದರು. ಇನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಎಲ್ಲಿಗೂ ಹೋಗಬಾರದು ಅಥವಾ ಅಧಿಕಾರಿಗಳೊಂದಿಗೆ ಮಾತನಾಡಬಾರದು ಎಂದು ಆಯುಕ್ತರು ನನಗೆ ಹೇಳಿದರು. ನನಗೆ ಯಾವ ಆಯ್ಕೆ ಇದೆ? ನನ್ನ ಬಳಿ ಇದ್ದ ಏಕೈಕ ಪರಿಹಾರವೆಂದರೆ ನಾನೇ ಚರಂಡಿಗೆ ಇಳಿದು ಸ್ವಚ್ಛಗೊಳಿಸುವುದಾಗಿತ್ತು ಎಂದು ಅವರು ಹೇಳಿದರು.

ಇದೇ ವೇಳೆ ಮೇಯರ್ ಶೋಭಾ ಸಿಕರ್ವಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಇಲ್ಲಿನ ಮಹಾನಗರ ಪಾಲಿಕೆ ಕಾಂಗ್ರೆಸ್ ಅಧೀನದಲ್ಲಿದೆ. ಇಲ್ಲಿನ ಪುರಸಭೆ ಕಾಂಗ್ರೆಸ್‌ನ ಅಧೀನದಲ್ಲಿದೆ. ರಾಜ್ಯದಲ್ಲಿ ನಮ್ಮ ಸರ್ಕಾರವಿದೆ. ಆದರೆ ಇಲ್ಲಿ ನಾವು ಕಾಂಗ್ರೆಸ್‌ನ ಮೇಯರ್ ಶೋಭಾ ಸಿಕರ್ವಾರ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದರೂ ಅವರು ಮೌನವಾಗಿದ್ದಾರೆ ಎಂದು ಕಿಡಿಕಾರಿದರು.

ಈ ಸಂಬಂಧ ಗ್ವಾಲಿಯರ್ ಮುನ್ಸಿಪಲ್ ಕಾರ್ಪೊರೇಶನ್‌ನ ಹೆಚ್ಚುವರಿ ಆಯುಕ್ತ ಮುನೀಶ್ ಸಿಂಗ್ ಸಿಕರ್ವಾರ್ ಮಾತನಾಡಿ, ಎಲ್ಲೆಲ್ಲಿ ಒಳಚರಂಡಿ ಸಂಬಂಧಿತ ಸಮಸ್ಯೆಗಳು ಉದ್ಭವಿಸಿದರೂ ಅವುಗಳನ್ನು ತಕ್ಷಣವೇ ಪರಿಹರಿಸಲಾಗಿದೆ. ಆ ವಾರ್ಡ್‌ನಲ್ಲಿಯೂ ನಗರಸಭೆಯಿಂದ ಚರಂಡಿ ಪಕ್ಕದಲ್ಲಿ ಕಾಮಗಾರಿ ನಡೆಯುತ್ತಿದ್ದು, ಅಂತಹ ಮಾಹಿತಿ ಬಂದಿದ್ದರೆ ಅದನ್ನೂ ಪರಿಹರಿಸಲಾಗುತ್ತಿತ್ತು ಎಂದು ಹೇಳಿದರು.

Share This Article