ಮಡಿಕೇರಿ ನಗರದಲ್ಲೇ ಪತ್ತೆಯಾಯ್ತು ಕಾಡು ಪಾಲಾದ ಸ್ಮಾರಕ

Public TV
2 Min Read

ಮಡಿಕೇರಿ: ನಗರದಲ್ಲಿ ಇತಿಹಾಸದ ಕುರುಹುಗಳನ್ನು ಬಿಟ್ಟು ಹೋಗಿರುವ ಸ್ಮಾರಕವೊಂದು ಕಾಡಿನೊಳಗೆ ಪತ್ತೆಯಾಗಿದ್ದು, ಬಿಸಿಲು-ಮಳೆ-ಗಾಳಿಗೂ ಜಗ್ಗದೆ ಸುಸ್ಥಿತಿಯಲ್ಲಿ ಭದ್ರವಾಗಿ ನೆಲೆ ನಿಂತಿದೆ. ಇದನ್ನು ಸ್ವತಂತ್ರ ಪೂರ್ವ ಭಾರತದ ವೈಸ್ರಾಯ್ ಲಾರ್ಡ್ ಇರ್ವಿನ್ ಸ್ಮಾರಕ ಎಂದು ಗುರುತಿಸಲಾಗಿದೆ.

ಹೌದು. ಸುಮಾರು 90 ವರ್ಷಗಳ ಇತಿಹಾಸವಿರುವ ಈ ಸ್ಮಾರಕ ಮಡಿಕೇರಿ ನಗರದ ಪ್ರವಾಸಿ ತಾಣ ರಾಜಾಸೀಟ್ ಬಳಿ ಇದೆ. ಪ್ರತಿಯೊಂದು ಸ್ಮಾರಕಗಳ ಹಿಂದೆಯೂ ಹಲವಾರು ಕಥೆಗಳಿರುತ್ತವೆ. ಸ್ಮಾರಕಗಳ ಸೌಂದರ್ಯದಷ್ಟೇ ಅವುಗಳ ಇತಿಹಾಸವೂ ಜನರನ್ನು ಸೆಳೆಯುತ್ತದೆ. ಐತಿಹಾಸಿಕ ಸ್ಮಾರಕಗಳು ಚರಿತ್ರೆಯನ್ನು ಅರಿಯುವ ದಾರಿ ದೀಪಗಳಾಗಿದ್ದು, ಇಂತಹ ಸ್ಮಾರಕಗಳನ್ನು ಉಳಿಸಿ ಬೆಳೆಸಿ, ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದರೆ ಊರಾಚೆ ಇರುವ ದಿಕ್ಕಿಲ್ಲದ ಸ್ಮಾರಕಗಳನ್ನು ರಾತ್ರೋರಾತ್ರಿ ನೆಲಸಮಗೊಳಿಸಿ ನಿವೇಶನ ಅಭಿವೃದ್ಧಿಪಡಿಸುವವರ ಹಾವಳಿಯಂತೂ ವಿಪರೀತವಾಗಿದೆ.

ಸ್ಮಾರಕದ ಹಿನ್ನೆಲೆ ಏನು?
ಸ್ಮಾರಕ ಪತ್ತೆಯಾದ ಸ್ಥಳ ಸ್ವತಂತ್ರ ಪೂರ್ವ ಭಾರತದ ವೈಸ್ರಾಯ್ ಲಾರ್ಡ್ ಇರ್ವಿನ್ 1929ರ ನವೆಂಬರ್ 29ರಂದು ಕೊಡಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊಡಗಿನ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ ಸ್ಥಳವಾಗಿದೆ. ಈ ಸ್ಮಾರಕ ನೆಲೆ ನಿಂತಿರುವ ಜಾಗದಲ್ಲಿ ಇವಿನ್ ಸ್ಮಾರಕವು ರಾಜಾಸೀಟ್ ಮತ್ತು ಗಾಂಧಿ ಮೈದಾನದ ನಡುವಿನಲ್ಲಿರುವ ಗುಡ್ಡದ ಮೇಲಿದೆ. ಸ್ಮಾರಕವು ಇರುವ ಬಗ್ಗೆ ಬಹುಪಾಲು ಸ್ಥಳೀಯರಿಗೆ ಮಾಹಿತಿ ಇರಲಿಲ್ಲ. ಈ ಸ್ಮಾರಕವು ಕಾಡು ಪಾಲಾಗಿ 30 ವರ್ಷಗಳು ಕಳೆದಿರಬಹುದು ಎನ್ನಲಾಗಿದೆ. ಹೀಗಾಗಿ ಇಂದಿನ ಪೀಳಿಗೆಯವರಿಗೆ ಇರ್ವಿನ್ ಸ್ಮಾರಕದ ಬಗ್ಗೆ ಎಳ್ಳಷ್ಟು ಮಾಹಿತಿಯಿಲ್ಲ.

ಪತ್ತೆಯಾಗಿರುವ ಸ್ಮಾರಕದ ಬಗ್ಗೆ ಮಾಹಿತಿಗಾಗಿ ಕೊಡಗಿನ ಇತಿಹಾಸವನ್ನು ತಿಳಿಸಲು ಪರಿಷ್ಕೃತಗೊಂಡಿರುವ “ಕೊಡಗು ಗೆಜೆಟಿಯರ್” ಹಾಗೂ “ಕೊಡಗಿನ ಇತಿಹಾಸ” ಪುಸ್ತಕವನ್ನು ತಿರುವಿ ಹಾಕಿದಾಗ, ಲಾರ್ಡ್ ಇರ್ವಿನ್ ಕೊಡಗಿಗೆ ಭೇಟಿ ನೀಡಿದ ಸಂದರ್ಭ ಕೊಡಗಿನ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ ನೆನೆಪಿಗೆ ಒಂದು ಸ್ಮಾರಕವಿತ್ತು ಎಂಬುದು ತಿಳಿದು ಬಂದಿದೆ. ಅದು ಈಗ ಇಲ್ಲವಾಗಿದೆ ಎಂದು ಮಾತ್ರ ಉಲ್ಲೇಖವಿದೆ. ಒಂದೊಂದು ಪ್ರಾಚೀನ ಸ್ಮಾರಕದ ಹಿಂದೆ ಒಂದೊಂದು ಕಥೆ ಇರುವುದರಿಂದ ಮುಂದಿನ ಪೀಳಿಗೆಯ ಅರಿವು ವಿಸ್ತರಣೆಗೆ ಅದನ್ನು ನಾವು ಸಂರಕ್ಷಿಸಬೇಕಿದೆ.

ಸ್ಮಾರಕಗಳು ವರ್ಷಗಳು ಉರುಳಿದಂತೆ ಆಂತರಿಕ ಹಾಗೂ ಬಾಹ್ಯ ಕಾರಣದಿಂದ ತನ್ನ ಸಮಸ್ಥಿತಿ ಕಳೆದುಕೊಳ್ಳುತ್ತವೆ. ಮೂಲ ಸ್ವರೂಪ ಕ್ಷೀಣಿಸಿ ವಿರೂಪವಾಗುತ್ತವೆ. ಅಂತಹ ಸ್ಥಿತಿಯಲ್ಲಿ ಅವುಗಳನ್ನು ಸಂರಕ್ಷಿಸಿ ಸಮಸ್ಥಿತಿಗೆ ಕೊಂಡೊಯ್ಯಬೇಕಾದ ಅಗತ್ಯತೆ ಇರುವುದರಿಂದ ಪುರಾತತ್ವ ಇಲಾಖೆ ಅಸ್ತಿತ್ವಕ್ಕೆ ಬಂದಿದೆ. ಕಣ್ಣೆದುರಿನಲ್ಲಿಯೇ ಅನೇಕ ಸ್ಮಾರಕಗಳು ನಾಶವಾಗುತ್ತಿದ್ದರೂ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿಯಾಗುತ್ತಿಲ್ಲ. ಹಾಗಾಗಿ ಸ್ಮಾರಕ, ಅವಶೇಷಗಳ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕಿದೆ.

1940ರ ನಂತರ ಸ್ಮಾರಕಗಳ ಸಂರಕ್ಷಣಾ ಕಾರ್ಯ ಮಹತ್ವ ಪಡೆದುಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಇದು ಕ್ಷೀಣಿಸುತ್ತಿದೆ. ಮತ್ತೆ ಸ್ಮಾರಕಗಳ ಸಂರಕ್ಷಣೆಗೆ ಜೀವತುಂಬಿ ಇತಿಹಾಸದ ಕುರುಹುಗಳನ್ನು ಉಳಿಸುವ ಮಹತ್ಕಾರ್ಯವಾಗಬೇಕಿದೆ. ಅಲ್ಲದೇ ಈ ಸ್ಮಾರಕವನ್ನು ಉಳಿಸಿಕೊಳ್ಳುವ ಅಗತ್ಯ ಇದೆ ಎಂದು ಸ್ಥಳೀಯರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *