ಮಾತೃ ಭೂಮಿ, ಭಾಷೆ ಮರೆಯಬೇಡಿ- ವಿದ್ಯಾರ್ಥಿಗಳಿಗೆ ವೆಂಕಯ್ಯನಾಯ್ಡು ಕರೆ

Public TV
1 Min Read

– ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಉಪರಾಷ್ಟ್ರಪತಿ

ಮೈಸೂರು/ಮಂಗಳೂರು: ಜೆ.ಎಸ್.ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಕನ್ನಡದಲ್ಲೇ ಭಾಷಣ ಆರಂಭಿಸಿ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ. ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಹೆಚ್ಚು ಸಂತಸ ತಂದಿದೆ ಎಂದರು. ಅಲ್ಲದೇ ಮೊದಲು ಶಿಕ್ಷಣ ಮುಗಿಸಿ ದೇಶದಲ್ಲೇ ಸೇವೆ ಸಲ್ಲಿಸಿ ಎಂದು ಹೇಳುತ್ತಿದ್ದೇವು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಈಗ ನೀವು ಬೇಕಾದರೆ ಬೇರೆ ಬೇರೆ ದೇಶದಲ್ಲಿ ಕೆಲಸ ಮಾಡಿ. ಆದರೆ ಮಾತೃ ಭೂಮಿ, ಮಾತೃಭಾಷೆ ಮಾತ್ರ ಮರೆಯಬೇಡಿ. ವಿದೇಶಗಳಿಗೆ ತೆರಳಿ ಸಾಧನೆ ಮಾಡಿ ಮತ್ತೆ ದೇಶಕ್ಕೆ ಬಂದು ಸೇವೆ ಸಲ್ಲಿಸಿ ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ಮಂಗಳೂರಿನ ಸುರತ್ಕಲ್ ಎನ್‌ಟಿಕೆ ಇಂಜಿನಿಯರಿಂಗ್ ಕಾಲೇಜಿನ 17ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದೆಲ್ಲೆಡೆ ಹಿಂದಿ ಹೇರಿಕೆ ವಿಚಾರ ರಾದ್ಧಾಂತ ಸೃಷ್ಟಿಸಿರುವಾಗಲೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮಾತೃಭಾಷೆಯ ಪರವಾಗಿ ಬ್ಯಾಟಿಂಗ್ ಮಾಡಿದರು. ನಾವು ಎಷ್ಟೇ ಎತ್ತರಕ್ಕೆ ಮುಟ್ಟಿದರೂ, ತಾಯಿಭಾಷೆ ಮರೆಯಬಾರದು. ಮನೆಯಲ್ಲಿ ಹಾಗೂ ನೆರೆಹೊರೆಯವರಲ್ಲಿ ಮಾತೃಭಾಷೆಯಲ್ಲೇ ಮಾತಾಡಬೇಕು. ಮಾತೃಭಾಷೆ ನಮ್ಮ ಕಣ್ಣಿನ ದೃಷ್ಟಿಯಿದ್ದಂತೆ. ಪರಭಾಷೆ ಕನ್ನಡಕ ಇದ್ದಂತೆ ಎಂದು ಹೇಳಿದರು.

ಹೈಸ್ಕೂಲ್ ವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವಂತಾಗಬೇಕು. ಯಾವುದೇ ಭಾಷೆ ಇರಲಿ, ಕೀಳರಿಮೆ ಬೇಡ. ಹಾಗೆಯೇ ಇತರ ಭಾಷೆಗಳ ಬಗ್ಗೆ ತೆಗಳಿಕೆಯನ್ನೂ ಇಟ್ಟುಕೊಳ್ಳದಿರಿ. ಜ್ಞಾನ ಎಲ್ಲೆಡೆಯಿಂದ ಬರಲಿ ಎನ್ನುವಂತೆ ವ್ಯವಹಾರಕ್ಕಷ್ಟೇ ಇತರ ಭಾಷೆಗಳಿರಲಿ ಎಂದು ಸಲಹೆ ನೀಡಿದರು. ಇನ್ನು ಯುವಕರು ದೈಹಿಕವಾಗಿಯೂ ಸದೃಢರಾಗಬೇಕು. ನನಗೆ 70 ವರ್ಷ ಆದರೂ ಈಗಲೂ ಒಂದು ಗಂಟೆ  ಬ್ಯಾಡ್ಮಿಂಟನ್ ಆಡುತ್ತೇನೆ ಎಂದು ತಮ್ಮ ಫಿಟ್ನೆಸ್ ಗುಟ್ಟನ್ನು ಬಿಚ್ಚಿಟ್ಟರು.

Share This Article
Leave a Comment

Leave a Reply

Your email address will not be published. Required fields are marked *