ಉಪ ರಾಷ್ಟ್ರಪತಿ ಚುನಾವಣೆ| ಸಂಸತ್ತಿನಲ್ಲಿ ಎನ್‌ಡಿಎ, ವಿಪಕ್ಷಗಳ ಬಲ ಎಷ್ಟಿದೆ?

Public TV
2 Min Read

ನವದೆಹಲಿ: ಉಪ ರಾಷ್ಟ್ರಪತಿ ಧನಕರ್ (Jagdeep Dhankhar) ರಾಜೀನಾಮೆ ಬೆನ್ನಲ್ಲೇ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದೆ. ಚುನಾವಣೆಗೆ ಅಧಿಕಾರಿಗಳನ್ನು ಅಂತಿಮಗೊಳಿಸಲಾಗುತ್ತಿದ್ದು, ಶೀಘ್ರದಲ್ಲೇ ಚುನಾವಣೆಗೆ (Vice President Election) ದಿನಾಂಕ ಘೋಷಣೆಯಾಗಲಿದೆ.

ಮೂಲಗಳ ಪ್ರಕಾರ, ಆಗಸ್ಟ್ ಅಂತ್ಯದೊಳಗೆ ಚುನಾವಣೆ ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಮೊನ್ನೆ ರಾಜೀನಾಮೆ ನೀಡುವ ಮುನ್ನ ರಾಷ್ಟ್ರಪತಿ ಭವನಕ್ಕೆ ಅನಿರೀಕ್ಷಿತವಾಗಿ ಧನಕರ್ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಯನ್ನು ತಬ್ಬಿಬ್ಬುಗೊಳಿಸಿರುವುದಾಗಿ ತಿಳಿದುಬಂದಿದೆ. ರಾಷ್ಟ್ರಪತಿಗಳ ಜೊತೆ ಚರ್ಚಿಸಿದ ಬಳಿಕ ರಾಜೀನಾಮೆ ನೀಡಿರುವುದಾಗಿ ಗೊತ್ತಾಗಿದೆ.

ಮುಂದಿನ ಬಿಹಾರ ಚುನಾವಣೆಯ (Bihar Election) ದೃಷ್ಟಿಯಿಂದ ಎನ್‌ಡಿಎ ಅಭ್ಯರ್ಥಿಯಾಗಿ ಅಚ್ಚರಿ ವ್ಯಕ್ತಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಭಾರತರತ್ನ ಪ್ರಶಸ್ತಿ ಪುರಸ್ಕೃತ ಕರ್ಪೂರಿ ಠಾಕೂರ್ ಅವರ ಪುತ್ರ ರಾಮ್ ನಾಥ್ ಠಾಕೂರ್ ಅವರ ಹೆಸರು ಮುಂಚೂಣಿಯಲ್ಲಿದೆ. ಅತ್ಯಂತ ಹಿಂದುಳಿದ ವರ್ಗ (ಕ್ಷೌರಿಕ) ಸಮಾಜಕ್ಕೆ ರಾಮ್‌ನಾಥ್ ಠಾಕೂರ್ ಸೇರಿದವರಾಗಿದ್ದಾರೆ. ಇದನ್ನೂ ಓದಿ: ಜಗದೀಪ್ ಧನಕರ್ ರಾಜೀನಾಮೆ ಸುತ್ತ ಅನುಮಾನದ ಹುತ್ತ- ದಿಢೀರ್‌ ರಿಸೈನ್‌ ಮಾಡಿದ್ದು ಯಾಕೆ?

 

ಬಿಜೆಪಿ ಅಧ್ಯಕ್ಷ ನಡ್ಡಾ, ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ, ಬಿಹಾರ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್, ಮಾಜಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೆಸರು ಕೂಡ ಕೇಳಿಬರುತ್ತಿದೆ. ಇದನ್ನೂ ಓದಿ: ಅಲ್-ಖೈದಾ ಸಂಘಟನೆಯೊಂದಿಗೆ ನಂಟು ಹೊಂದಿದ್ದ ನಾಲ್ವರು ಉಗ್ರರ ಬಂಧನ

ಈ ಮಧ್ಯೆ, ಧನಕರ್ ರಾಜೀನಾಮೆ ಅನುಮಾನಸ್ಪದವಾಗಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಬೇಕು ಅಂತ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಜಗದೀಪ್ ಧನಕರ್ ಬಿಜೆಪಿ-ಆರ್‌ಎಸ್‌ಎಸ್ ಸಮರ್ಥಿಸಿಕೊಳ್ಳುತ್ತಿದ್ದರು. ಅವರ ನಿಷ್ಠೆ ಬಿಜೆಪಿ- ಆರ್‌ಎಸ್‌ಎಸ್ ಜೊತೆಗಿತ್ತು ಆದ್ರೂ, ರಾಜೀನಾಮೆ ಕೊಟ್ಟಿದ್ಯಾಕೆ ಅಂತ ಪ್ರಶ್ನೆ ಮಾಡಿದ್ದಾರೆ.

ಸಂಸತ್ತಿನಲ್ಲಿ ಎನ್‌ಡಿಎ ಬಲ
ಈಗಿನ ಬಲ – 782, ಬಹುಮತ: 392
(ಲೋಕಸಭೆ 1 ಖಾಲಿ; ರಾಜ್ಯಸಭೆ- 5 ಸ್ಥಾನ ಖಾಲಿ)
ಎನ್‌ಡಿಎ ಪರ – 427
ಲೋಕಸಭೆ – 293
ರಾಜ್ಯಸಭೆ – 134

ಸಂಸತ್ತಿನಲ್ಲಿ ವಿಪಕ್ಷಗಳ ಬಲ
ವಿಪಕ್ಷಗಳ ಪರ – 355
ಲೋಕಸಭೆ – 249
ರಾಜ್ಯಸಭೆ – 106

Share This Article