ಕೊಲೆಗೆ ಕೊಲೆಯೇ ಪ್ರತೀಕಾರ, ದೀಪಕ್ ರಾವ್ ಕೊಲೆಗೆ ಬಶೀರ್ ಹತ್ಯೆ – ವಿಹೆಚ್‍ಪಿ ಮುಖಂಡ ಶೇಣವ ಸಮರ್ಥನೆ

Public TV
2 Min Read

ಮಂಗಳೂರು: ಇತ್ತೀಚೆಗೆ ನಗರದ ಕೊಟ್ಟಾರದಲ್ಲಿ ದುಷ್ಕರ್ಮಿಗಳ ಮಾರಣಾಂತಿಕ ಹಲ್ಲೆಗೆ ಬಲಿಯಾದ ಬಶೀರ್ ಹತ್ಯೆಯನ್ನು ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಸಮರ್ಥಿಸಿಕೊಂಡಿದ್ದಾರೆ.

ಮಂಗಳೂರಿನಲ್ಲಿ ನಡೆದ `ಹಡೆದವ್ವನ ಶಾಪ’ ಅನ್ನುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬಶೀರ್ ಎನ್ನುವ ಯುವಕನ ಹತ್ಯೆಯಾಗಿದೆ. ಮಾಧ್ಯಮಗಳಲ್ಲಿ ಒಬ್ಬ ಮುಗ್ಧ ಮುಸ್ಲಿಮನ ಹತ್ಯೆಯಾಯ್ತು ಅಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದ್ರೆ ಬಶೀರ್ ಸಾವಿನ ಮೊದಲು ಒಬ್ಬ ಅಮಾಯಕ ದೀಪಕ್ ರಾವ್ ಕೊಲೆಯಾಗಿದೆ. ಹೀಗಾಗಿ ಕಾಟಿಪಳ್ಳದ ಯುವಕ ದೀಪಕ್ ರಾವ್ ಹತ್ಯೆಗೆ ಪ್ರತಿಕಾರವಾಗಿ ಬಶೀರ್ ಹತ್ಯೆಯಾಗಿದೆ. ಬಶೀರ್ ಹತ್ಯೆಯಾಗಿದ್ದಕ್ಕೆ ನಮಗೇನೂ ಚಿಂತೆಯಿಲ್ಲ. ವಿಎಚ್‍ಪಿ ಅಧ್ಯಕ್ಷನಾಗಿ ನಾನು ಇದನ್ನು ಸಮರ್ಥಿಸಿಕೊಳ್ಳುತ್ತೇನೆಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

ಇತ್ತೀಚೆಗೆ ಭಾರೀ ವಿವಾದಕ್ಕೀಡಾಗಿ ಬಿಡುಗಡೆಯಾದ ಪದ್ಮಾವತ್ ಚಿತ್ರದಲ್ಲಿ ಮೂರು ಬಾರಿ ಶಸ್ತ್ರ ಇಲ್ಲದೆ ಕೊಲ್ಲಲ್ಲ. ಹೀಗಾಗಿ ಪ್ರಾಣ ಭಿಕ್ಷೆ ನೀಡಿದ್ದರ ಫಲವಾಗಿ ಅವನ ಕೊಲೆಯಾಗುತ್ತೆ. ಇಂತಹ ಅನೇಕ ಪ್ರಕರಣಗಳು ನಮ್ಮಲ್ಲಿ ನಡೆದಿವೆ. ಪ್ರಶಾಂತ್ ಪೂಜಾರಿ, ಕುಟ್ಟಪ್ಪ, ಶರತ್ ಮಡಿವಾಳ ಇವರೆಲ್ಲರು ಏನ್ ಮಾಡಿದ್ದಾರೆ ಅಂತ ಅವರನ್ನು ಹತ್ಯೆ ಮಾಡಿದ್ದಾರೆ. ಅಂದ್ರೆ ಯಾರೋ ಒಬ್ಬ ಅಶ್ರಫ್ ಕೊಲೆಯಾಗಿದ್ದಕ್ಕೆ ಪ್ರತೀಕಾರವಾಗಿ ಒಬ್ಬ ಮುಗ್ಧನನ್ನು ಕೊಲೆ ಮಾಡಬಹುದು. ಹಾಗಾದ್ರೆ ದೀಪಕ್ ರಾವ್ ಎನ್ನುವ ಮುಗ್ಧನ ಹತ್ಯೆಗೆ ಬಶೀರ್ ಅನ್ನೋವವನ ಹತ್ಯೆ ಮಾಡಬಾರದಾ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ನಮ್ಮ ಮೇಲೆ ಕೇಸ್ ಆದ್ರೂ, ಅದಕ್ಕೆ ನಾವು ಬದ್ಧರು. ಯಾಕಂದ್ರೆ ಸಮಾಜ ರೊಚ್ಚಿಗೇಳುತ್ತದೆ. ಸಮಾಜದ ಒಂದು ವರ್ಗ ಅದಕ್ಕೆ ಸ್ಪಂದಿಸಲು ತಯಾರಿದೆ. ಅಂತವರಿಗೆ ರಕ್ಷಣೆ ಕೊಡುವುದು ನಮ್ಮ ಸಮಾಜದ ಕರ್ತವ್ಯ ಅಂತ ಹೇಳಿದ್ರು.

ದೀಪಕ್ ಹತ್ಯೆ: ಜನವರಿ 3ರಂದು ಮಧ್ಯಾಹ್ನ ದೀಪಕ್ ರಾವ್ ಅವರು ತನ್ನ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಪರಿಣಾಮ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದರು. ಕೂಡಲೇ ಘಟನೆಯ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದರು. ನಂತರ ಅವರನ್ನು ಅಜ್ಞಾತಸ್ಥಳದಲ್ಲಿಟ್ಟು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿದ್ದು, ಹಲವಾರು ಪ್ರತಿಭಟನೆಗಳು ನಡೆದವು. ಅಲ್ಲದೇ ಬಡ ಕುಟುಂಬದಿಂದ ಬಂದಿರುವ ದೀಪಕ್, ಮನೆಗೆ ಆಧಾರಸ್ತಂಭವಾಗಿದ್ದರಿಂದ ಮಗನನ್ನು ಕಳೆದುಕೊಂಡ ತಾಯಿಗೆ ನೆರವು ನೀಡಲು ಹಲವಾರು ಸಂಘ-ಸಂಸ್ಥೆಗಳು ಮುಂದೆ ಬಂದವು. ಸುಮಾರು 43 ಲಕ್ಷ ರೂ. ನೆರವು ದೊರೆತಿದೆ.

ಬಶೀರ್ ಮೇಲೆ ಹಲ್ಲೆ: ಇತ್ತ ದೀಪಕರ್ ರಾವ್ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಸುದ್ದಿ ಹರಡುತ್ತಿದ್ದಂತೆಯೇ ಮಂಗಳೂರು ಬೂದಿ ಮುಚ್ಚಿ ಕೆಂಡದಂತಾಗಿದ್ದು, ಅಂದೇ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಬಶೀರ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಪರಿಣಾಮ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು, ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಬಳಿಕ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. ಬಶೀರ್ ಮೇಲಿನ ಹಲ್ಲೆಯ ಸಿಸಿಟಿವಿ ದೃಶ್ಯ ಲಭ್ಯವಾಗಿತ್ತು. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

https://www.youtube.com/watch?v=orOh2reo_XM

Share This Article
Leave a Comment

Leave a Reply

Your email address will not be published. Required fields are marked *