ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ವಿ.ರಾಧಾ ಇನ್ನಿಲ್ಲ

Public TV
1 Min Read

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ವಿ.ರಾಧಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ರಾಧಾ ಅವರು ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ 1 ಗಂಟೆಗೆ ವಿಧಿವಶರಾಗಿದ್ದಾರೆ. ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿ ನಿಧನದ ಬಳಿಕ ರಾಧಾ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ನಾಗವಾರದ ಹೊರಮಾವಿನ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

1964ರಲ್ಲಿ ನವಕೋಟಿ ನಾರಾಯಣ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ಆರು ಮೂರು ಒಂಭತ್ತು (1970), ಭಲೇ ಅದೃಷ್ಟವೋ ಅದೃಷ್ಟ 9(1971), ಯಾವ ಜನ್ಮದ ಮೈತ್ರಿ, ದೇವರು ಕೊಟ್ಟ ತಂಗಿ, ಮಿಥಿಲೆಯ ಸೀತೆಯರು, ಮನಸ್ಸಿದ್ದರೆ ಮಾರ್ಗ, ಲಗ್ನಪತ್ರಿಕೆ, ಮಂಕುದಿಣ್ಣೆ, ಮೇಯರ್ ಮುತ್ತಣ್ಣ, ಬಂಗಾರದ ಮನುಷ್ಯ, ಭಲೇಹುಚ್ಚ ಸೇರಿದಂತೆ ತೆಲುಗು, ಮಲೆಯಾಳಂ, ತಮಿಳು ಸೇರಿ 250 ಚಿತ್ರಗಳಲ್ಲಿ ರಾಧಾ ಅವರುಯ ನಟಿಸಿದ್ದರು.

ಜಂಬೂಸವಾರಿ ಸಿನಿಮಾಗಾಗಿ (1989)ರಲ್ಲಿ ಸ್ವರ್ಣಕಮಲ ಪ್ರಶಸ್ತಿ, ಹರಕೆಯ ಕುರಿ (1992) ಸಿನಿಮಾಗಾಗಿ ರಜತಕಮಲ ಪ್ರಶಸ್ತಿ, 2003ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ರಾಧಾ ಅವರು ಪಡೆದಿದ್ದರು.

ರಾಜ್‍ಕುಮಾರ್, ಶ್ರೀನಾಥ್, ಕಲ್ಯಾಣ್‍ಕುಮಾರ್, ಉದಯ್‍ಕುಮಾರ್, ವಿಷ್ಣುವರ್ಧನ್, ಶಂಕರ್‍ನಾಗ್ ನಟರ ಜೊತೆಯಲ್ಲಿ ರಾಧಾ ತೆರೆಯನ್ನು ಹಂಚಿಕೊಂಡಿದ್ದರು. ಇನ್ನು ಚಂದನವನದಲ್ಲಿ ರಾಧಾರನ್ನು ದೇವರು ಕೊಟ್ಟ ತಂಗಿ ಎಂದು ಕರೆಯಲಾಗುತ್ತಿತ್ತು. ರಾಜ್ ಕುಮಾರ್ ಅಭಿನಯದ ದೇವರು ಕೊಟ್ಟ ತಂಗಿ ಚಿತ್ರದಲ್ಲಿ ರಾಧಾ ಅವರು ತಂಗಿಯಾಗಿ ಮನೋಜ್ಞವಾಗಿ ಅಭಿನಯಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *