ಶಾಮನೂರು ಅಂತ್ಯಕ್ರಿಯೆಗೆ ಸ್ಥಳ ನಿಗದಿ – ಸೋಮವಾರ 12 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

2 Min Read

– ಬೆಂಗಳೂರಿನ ವೀರಶೈವ ಮಹಾಸಭಾ ಕಚೇರಿಯಲ್ಲಿ ಅಂತಿಮ ನಮನ

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕಪ್ಪ (Shamanur Shivashankarappa) ಅವರ ಅಂತ್ಯಕ್ರಿಯೆಗೆ ಈಗ ಸಿದ್ಧತೆಗಳು ನಡೆಯುತ್ತಿವೆ. ಸೋಮವಾರ (ಡಿ.15) ಸಂಜೆ 5 ಗಂಟೆ ಹೊತ್ತಿಗೆ ದಾವಣಗೆರೆಯೆ ಕಲ್ಲೇಶ್ವರ ರೈಸ್ ಮಿಲ್ ಜಾಗದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ಕುಟುಂಬ ನಿರ್ಧರಿಸಿದೆ. ಪತ್ನಿ ಪಾರ್ವತಮ್ಮ ಅವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲು ತಯಾರಿ ನಡೆದಿದೆ.

ಇದಕ್ಕೆ ಮುನ್ನ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಶಾಮನೂರು ಪುತ್ರ ಎಸ್‌.ಎಸ್‌ ಮಲ್ಲಿಕಾರ್ಜುನ ಅವರ ಮನೆಯಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಹೈಸ್ಕೂಲ್ ಮೈದಾನದಲ್ಲಿ ಸಂಜೆ 4 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾಂಗ್ರೆಸ್‌ನ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ

ಬೆಂಗಳೂರಿನ ವೀರಶೈವ ಮಹಾಸಭಾದಲ್ಲಿ ಅಂತಿಮ ದರ್ಶನ
ಸದ್ಯ ಅಖಿಲ ಭಾರತ ವೀರಶೈವ ಮಹಾಸಭಾ (Veerashaiva Mahasabha) ಕಟ್ಟಿದ್ದ ಶಿವಶಂಕರಪ್ಪನವರಿಗೆ ಮಹಾಸಭಾದಿಂದ ಅಂತಿಮ ನಮನ ಸಲ್ಲಿಸಲಾಗುತ್ತಿದೆ. ಬೆಂಗಳೂರಿನ ಬಳ್ಳಾರಿ ರಸ್ತೆ, ಪ್ಯಾಲೇಸ್ ಗ್ರೌಂಡ್ ಎರುರಿನ ಮುಖ್ಯ ಕಚೇರಿಯಲ್ಲಿ ಪಾರ್ಥಿವ ಶರೀರ ಇರಿಸಲಾಗಿದೆ. ರಾಜಕೀಯ ಗಣ್ಯರು, ಮಹಾಸಭಾ ಮುಖಂಡರು, ಸದಸ್ಯರ ಅಂತಿಮ ದರ್ಶನಕ್ಕೆ ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯೊಳಗೆ ದಾವಣಗೆರೆಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ ಎಂದು ಮಹಾಸಭಾದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಶಾಮನೂರು ನಿಧನ – ಸೋಮವಾರ ದಾವಣಗೆರೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ

ಕಳೆದ ಮೂರು ತಿಂಗಳಿಂದ ಆಸ್ಪತ್ರೆ
ವಯೋ ಸಹಜ ಅನಾರೋಗ್ಯ ಸಂಬಂಧ ಕಳೆದ ಮೂರು ತಿಂಗಳಿಂದ ಬೆಂಗಳೂರಿನ ಸ್ಪರ್ಷ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ, ಭಾನುವಾರ ಸಂಜೆ 6.20ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ತಿಂಗಳ ಹಿಂದೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರನ್ನು ದಾವಣಗೆರೆಗೆ ಕರೆತರಲಾಗಿತ್ತು. ನಗರಕ್ಕೆ ಬಂದ ಒಂದು ವಾರದ ಬಳಿಕ ಆರೋಗ್ಯ ಸ್ಥಿತಿ ಏರುಪೇರಾದ ಕಾರಣ, ಮತ್ತೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಕ್ಟೋಬರ್‌ 23ರಿಂದ ಸ್ಪರ್ಷ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಶಾಮನೂರು ಅವರಿಗೆ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ್‌ ಸೇರಿ ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರು, ಸೊಸೆ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸೇರಿ ಮೂವರು ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಇದ್ದಾರೆ.

Share This Article