ಇಬ್ಬರಲ್ಲ, 20ಕ್ಕೂ ಹೆಚ್ಚು ಮಂದಿಯಿಂದ ಸ್ಕೆಚ್‌ – ಗುರೂಜಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಸುಲಿಗೆಗೆ ಇಳಿದಿದ್ದ ಹಂತಕರು

Public TV
3 Min Read

ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯನ್ನು ಇಬ್ಬರು ಸೇರಿ ಹತ್ಯೆ ಮಾಡಿದ್ದಲ್ಲ. 20 ರಿಂದ 25 ಜನರ ತಂಡ ಸೇರಿ ಕೊಲೆಯ ಸ್ಕೆಚ್‌ ಹಾಕಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು. ಮಂಗಳವಾರ ಮಧ್ಯಾಹ್ನ ಮಹಾಂತೇಶ್, ಮಂಜುನಾಥ ಇಬ್ಬರು ಹುಬ್ಬಳ್ಳಿ ಹೋಟೆಲ್‌ನಲ್ಲಿ ಗುರೂಜಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆದರೆ ಈ ಹತ್ಯೆಯ ಹಿಂದೆ ಒಂದು ತಂಡವೇ ಕೆಲಸ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ದ್ವೇಷಕ್ಕೆ ಕಾರಣ ಏನು?
ಮಹಾಂತೇಶ್ 2008ರಲ್ಲಿ ಗುರೂಜಿ ಅವರ ಚಂದ್ರಶೇಖರ ಗೌರಿ ಪರಿವಾರ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಕೆಲಸದ ಕೌಶಲ್ಯ ಮತ್ತು ಸಾಮರ್ಥ್ಯ ಕಂಡು ಈತನನ್ನು ಮುಂಬೈ  ಬ್ರ್ಯಾಂಚ್‌  ಒಂದರ ಮುಖ್ಯಸ್ಥನನ್ನಾಗಿ ಗುರೂಜಿ ನೇಮಕ ಮಾಡುತ್ತಾರೆ. ತನಗೆ ನೀಡಿದ ಜವಾಬ್ದಾರಿಯನ್ನು ದುರುಪಯೋಗ ಪಡಿಸಿಕೊಂಡ ಈತ ಗುರೂಜಿ ಅವರ ಸಲಹೆ ಪಡೆಯಲು ಬರುವವರ ಜೊತೆಗೆ ನೇರವಾಗಿ ವ್ಯವಹಾರ ಮಾಡಲು ಆರಂಭಿಸುತ್ತಾನೆ. ಇದನ್ನೂ ಓದಿ: ಗುರೂಜಿಯನ್ನು ನಾವು ದೇವರಂತೆ ಕಾಣುತ್ತಿದ್ದೆವು: ವನಜಾಕ್ಷಿ

ಸರಳವಾಸ್ತು ಮಾಡಿಕೊಡಿಕೊಳ್ಳಲು ನಿಗದಿಪಡಿಸಿದ ಶುಲ್ಕವನ್ನು ಕಂಪನಿಗೆ ನೀಡದೇ ತಾನೇ ಗುಳುಂ ಮಾಡುತ್ತಾನೆ. ಇದೇ ಸಮಯದಲ್ಲಿ ಮಹಾಂತೇಶ್‌ಗೆ ಮಂಜುನಾಥನ ಪರಿಚಯವಾಗುತ್ತದೆ. ಕೊನೆಗೆ ಮಂಜುನಾಥ ಮತ್ತು ಇತನ ಜೊತೆಗೆ ಇನ್ನು ಹಲವು ಮಂದಿ ಮೋಸ ಮಾಡಿರುವ ವಿಚಾರ ಗುರೂಜಿಗೆ ತಿಳಿಯುತ್ತದೆ. ಇವರ ಮೇಲೆ ಸಿಟ್ಟಾದ ಗುರೂಜಿ ಮಹಾಂತೇಶ್‌ ತಂಡದಲ್ಲಿದ್ದ 20 ರಿಂದ 25 ಮಂದಿಯನ್ನು 2016ರಲ್ಲಿ ಕೆಲಸದಿಂದಲೇ ತೆಗೆದು ಹಾಕುತ್ತಾರೆ. ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಗುರೂಜಿ ಮೇಲೆ ಇವರಿಗೆ ದ್ವೇಷ ಆರಂಭವಾಗುತ್ತದೆ.

ಕಿರಾಣಿ ಅಂಗಡಿಯಲ್ಲಿ ನಷ್ಟ:
ಕೆಲಸ ಬಿಟ್ಟ ಬಳಿಕ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಮಹಾಂತೇಶ್ ಕಿರಾಣಿ ಅಂಗಡಿ ತೆರೆದಿದ್ದ. 2018 ರಿಂದ ಒಂದು ವರ್ಷಗಳ ಕಾಲ ಕಿರಾಣಿ ಅಂಗಡಿ ನಡೆಸಿದ್ದರೂ ನಷ್ಟ ಅನುಭವಿಸಿದ್ದ. ಇದಾದ ಬಳಿಕ ಮಹಾಂತೇಶ್‌ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡಲು ಮುಂದಾದ. ಮಹಾಂತೇಶನ ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಮಂಜುನಾಥನೂ ಸಹಕಾರ ನೀಡಿದ್ದ. ಇವರಿಬ್ಬರೂ ಸೇರಿ ಹುಬ್ಬಳ್ಳಿಯ ಖಾಸಗಿ ಕಟ್ಟಡದಲ್ಲಿ ರಿಯಲ್‌ ಎಸ್ಟೇಟ್‌ ಕಂಪನಿಯನ್ನು ತೆರೆದಿದ್ದರು. ಹುಬ್ಬಳ್ಳಿ, ಧಾರವಾಡ, ಜಮಖಂಡಿ, ಮುಧೋಳದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮಾಡುತ್ತಿದ್ದರು. ಆದರೆ ಈ ವ್ಯವಹಾರ ನಷ್ಟವಾಗಿತ್ತು. ಇದರಿಂದ ಇಬ್ಬರು ಭಾರೀ ಪ್ರಮಾಣದಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸಿದ್ದರು. ಈ ಆರ್ಥಿಕ ನಷ್ಟವನ್ನು ಸರಿಪಡಿಸಲು ಹೂಡಿದ ಕುತಂತ್ರವೇ ಬ್ಲ್ಯಾಕ್‌ಮೇಲ್‌. ಚಂದ್ರಶೇಖರ ಗುರೂಜಿ ಅವರಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಸುಲಿಗೆ ಮಾಡಲು ಇವರಿಬ್ಬರು ಮುಂದಾಗಿದ್ದರು. ಈ ಕುತಂತ್ರಕ್ಕೆ ಚಂದ್ರಶೇಖರ ಗುರೂಜಿ ಬಗ್ಗಿರಲಿಲ್ಲ.

ಬ್ಲ್ಯಾಕ್‌ಮೇಲ್‌ ಹೇಗೆ?
ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ವಿಮಾನ ನಿಲ್ದಾಣದ ರಸ್ತೆಯ ಡೆಕತ್ಲಾನ್ ಶೋರೂಂ ಹಿಂದೆ ʼಗೋಕುಲʼ ಹೆಸರಿನಲ್ಲಿ ಅಪಾರ್ಟ್‌ಮೆಂಟ್‌ ಕಟ್ಟಿಸಿದ್ದರು. ಆರಂಭದಲ್ಲಿ ಈ ಅಪಾರ್ಟ್‌ಮೆಂಟ್‌ ಗುರೂಜಿಯವರ ಬೇನಾಮಿ ಆಸ್ತಿಯಾಗಿದ್ದು ಮಹಾಂತೇಶ್‌ ಪತ್ನಿಯ ಹೆಸರಿನಲ್ಲಿ ನಿರ್ಮಿಸಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಈ ಆಸ್ತಿ ಬೇನಾಮಿ ಆಗಿರಲಿಲ್ಲ. ಗುರೂಜಿ ಅವರ ಸ್ವಂತ ಆಸ್ತಿಯಾಗಿದ್ದು ಈ ಅಪಾರ್ಟ್‌ಮೆಂಟ್‌ನಲ್ಲಿ ಮಹಾಂತೇಶ್‌ ಪತ್ನಿ ಜೊತೆ ವಾಸವಾಗಿದ್ದ.

ಈ ಅಪಾರ್ಟ್‌ಮೆಂಟ್‌ ವಿಚಾರವಾಗಿ ಮಹಾಂತೇಶ್‌ ಮತ್ತು ಮಂಜುನಾಥ ಕಾನೂನು ಸಮರಕ್ಕೆ ಇಳಿದಿದ್ದರು. ಅಪಾರ್ಟ್‌ಮೆಂಟ್‌ ಸರಿಯಾಗಿ ನಿರ್ಮಾಣಗೊಂಡಿಲ್ಲ, ಪಾರ್ಕಿಂಗ್‌ಗೆ ಜಾಗವಿಲ್ಲ, ಮಳೆ ನೀರು ಸರಿಯಾಗಿ ಹೋಗುತ್ತಿಲ್ಲ, ಸೋಲಾರ್‌ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ಧಾರವಾಡ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಈ ವಿಚಾರವಾಗಿ ಗುರೂಜಿ ಪ್ರಶ್ನೆ ಮಾಡಿದಾಗ ಹಣವನ್ನು ನೀಡಿದರೆ ದೂರನ್ನು ಹಿಂಪಡೆಯುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ಹಣ ನೀಡದೇ ಇದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದರು. ಆದರೆ ಗುರೂಜಿ ಹಂತಕರ ಜೀವ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್‌ಗೆ ಬಗ್ಗಿರಲಿಲ್ಲ. ಹಣ ನೀಡದ್ದಕ್ಕೆ ಸಿಟ್ಟಾಗಿದ್ದ ಇವರು ಗುರೂಜಿ ವಿರುದ್ಧ ದ್ವೇಷ ಸಾಧಿಸಲು ಮುಂದಾಗುತ್ತಿದ್ದರು. ಯಾವುದೇ ಬೆದರಿಕೆಗೆ ಜಗ್ಗದ ಕಾರಣ ಸಿಟ್ಟಾಗಿದ್ದ ಇವರು ಪೂರ್ವ ತಯಾರಿ ಮಾಡಿಕೊಂಡು ಬಂದು ಮಂಗಳವಾರ ಮಧ್ಯಾಹ್ನ ಕೊಲೆ ಮಾಡಿದ್ದಾರೆ.

 

ಎಫ್‌ಐಆರ್‌ ದಾಖಲು:
ಗುರೂಜಿ ಸಂಬಂಧಿ ಸಂಜಯ್‌ ಅಂಗಡಿ ಎಂಬವರು ನೀಡಿದ ದೂರಿನ ಆಧಾರದಲ್ಲಿ ವಿದ್ಯಾನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 34(ಏಕೋದ್ದೇಶಕ್ಕಾಗಿ ಹಲವು ವ್ಯಕ್ತಿಗಳು ಮಾಡಿದ ಕೃತ್ಯ), 302(ಕೊಲೆ) ಅಡಿ ಎಫ್‌ಐಆರ್‌ ದಾಖಲಾಗಿದೆ.

ಮಂಗಳವಾರ ಹೋಟೆಲ್‌ಗೆ ಬಂದಿದ್ದ ಮಹಾಂತೇಶ್‌ ಮತ್ತು ಮಜಂಜುನಾಥ್‌ ಅಪಾರ್ಟ್‌ಮೆಂಟ್‌ ವಿಚಾರ ಸಂಬಂಧ ಮಾತನಾಡಲು ಬನ್ನಿ ಎಂದು ಗುರೂಜಿ ಅವರನ್ನು ಕರೆದು ಹತ್ಯೆ ಮಾಡಿದ್ದಾರೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *